ರಾಮಮೂರ್ತಿ ನವಲಿ
ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಕೊನೆಗೂ ಹಸಿರು ನಿಶಾನೆ ತೋರಿಸಿದೆ.
ಕಳೆದ ವರ್ಷ ಉತ್ಸವ ಆಚರಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವರ್ಷ ಆಚರಣೆಗೆ ಹಿಂದೇಟು ಹಾಕಿತ್ತು. ಗಂಗಾವತಿ ಅಖಂಡ ತಾಲೂಕಿನಲ್ಲಿ ಬರುವ ಕನಕಗಿರಿ ಉತ್ಸವಕ್ಕೆ ಮುಂದಾಗಿ, ಆನೆಗೊಂದಿ ಉತ್ಸವ ಕಡೆಗಣಸುತ್ತಿದ್ದಾರೆಂಬ ಕೂಗು ಕೇಳಿ ಬಂದಿತ್ತು. ಸ್ಥಳೀಯ ಶಾಸಕರು, ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆಂಬ ಆರೋಪ ಮಾಡಿದ್ದರು. ಕಳೆದ ಬಾರಿ ಆನೆಗೊಂದಿ ಉತ್ಸವ ನಿಗದಿಪಡಿಸಿದ ಅನುದಾನಕ್ಕಿಂತ ಹೆಚ್ಚು ವ್ಯಯಿಸಲಾಗಿದೆ ಎಂಬ ಕಾರಣಕ್ಕೆ ಈ ಬಾರಿ ಉತ್ಸವ ಕೈಬಿಡಲು ಚಿಂತನೆ ನಡೆದಿದೆ ಎನ್ನುವ ಮಾತುಗಳು ಕೆಳಿ ಬಂದಿದ್ದವು.ವಿಜಯನಗರ ಸಾಮ್ಯಾಜ್ಯದ ರಾಜಧಾನಿಯಾಗಿದ್ದ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಮಂಗಳವಾರ ಸಮ್ಮತಿ ನೀಡಿದೆ. ಈ ಮಧ್ಯೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನಿವಾಸಕ್ಕೆ ತೆರಳಿ ಆನೆಗೊಂದಿ ಉತ್ಸವ ಆಚರಿಸಲು ಅನುದಾನ ನೀಡಬೇಕು ಮತ್ತು ಕಳೆದ ವರ್ಷದ ಉತ್ಸವದ ಬಾಕಿ ಹಣ ನೀಡಬೇಕೆಂದು ಮನವಿ ಮಾಡಿದ್ದರಿಂದ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕಳೆದ ವರ್ಷ ಆನೆಗೊಂದಿ ಉತ್ಸವಕ್ಕೆ ಖರ್ಚು ಮಾಡಿದ್ದ ಬಾಕಿ ಹಣವನ್ನು ಸರ್ಕಾರ ನೀಡಲು ಮುಂದಾಗಿದೆ ಎನ್ನಲಾಗಿದೆ. ₹ 5 ಕೋಟಿ ಬಾಕಿ ಇದ್ದಿದ್ದರಿಂದ ಉತ್ಸವದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಲೆಯುತ್ತಿದ್ದರು. ಈಗ ಬಾಕಿ ಚುಕ್ತಾ ಮಾಡುತ್ತಿದ್ದು ಮತ್ತೆ ಉತ್ಸವಕ್ಕೆ ಕಳೆ ಬರಲಿದೆ.
ಗತವೈಭವದ ಉತ್ಸವ:
ಐತಿಹಾಸಿಕ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಳೆದ ವರ್ಷದ ಬಾಕಿ ಅನುದಾನ ಬಿಡುಗಡೆ ಮಾಡುವುದಾಗಿಯೂ ಸಚಿವರು ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಉತ್ಸವದ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.