ಕಾರಟಗಿ:
ಸೋಮವಾರದೊಳಗೆ ವೇತನ ಪಾವತಿ ಮಾಡಿಸುವುದಾಗಿ ಕೊಟ್ಟಿದ್ದ ಭರವಸೆ ಹುಸಿಯಾಗುತ್ತಿದ್ದಂತೆ ಗ್ಯಾಂಗ್‌ಮನ್‌ಗಳು ಇಲ್ಲಿನ ನೀರಾವರಿ ಕಚೇರಿಯ ಮುಂದೆ ಪುನಃ ಹೋರಾಟ ನಡೆಸಿದ್ದರು.
ಗ್ಯಾಂಗ್‌ಮನ್‌ಗಳ ಪ್ರತಿಭಟನೆಯಿಂದ ಕಾಲುವೆ, ಉಪಕಾಲುವೆಗಳ ನೀರು ನಿರ್ವಹಣೆ ಸಮಸ್ಯೆಯಾಗಿ ರೈತರು ತೊಂದರೆ ಅನುಭವಿಸಿದರು. ಕಾಲುವೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ನೀರು ಹರಿಯದೆ ಸಮಸ್ಯೆ ಹೆಚ್ಚಾಗಿತ್ತು. ಸಮಸ್ಯೆ ಅರಿತ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶ ಗೌಡ ಸಚಿವ ಶಿವರಾಜ ತಂಗಡಗಿಗೆ ಅವರಿಗೆ ದೂರವಾಣಿ ಮೂಲಕ ವಿಷಯ ಗಮನಕ್ಕೆ ತಂದಿದ್ದಾರೆ.ಸ್ಥಳಕ್ಕೆ ಆಗಮಿಸಿದ ವಡ್ಡರಹಟ್ಟಿಯ ಕಾಲುವೆ ನಂ. ೨ ವಿಭಾಗೀಯ ಕಚೇರಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ.ಎಸ್. ಗೋಡೇಕರ, ನಿಮ್ಮ ಬಾಕಿ ವೇತನದ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸರ್ಕಾರದಿಂದ ಹಣ ಬಿಡುಗಡೆಗೊಳಿಸುವಂತೆಯೂ ಕೂಡಾ ಒತ್ತಾಯಿಸಿದ್ದೇನೆ. ನೀವು ಕೂಡಲೇ ಪ್ರತಿಭಟನೆ ಹಿಂಪಡೆದು ಕೆಲಸಕ್ಕೆ ಹೋಗಬೇಕು. ಭತ್ತ ಬೆಳೆದ ರೈತರಿಗೆ ನೀರು ಮುಟ್ಟದೇ ತೊಂದರೆಯಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಗ್ಯಾಂಗಮನ್‌ಗಳೂ ಸುತಾರಾಂ ಒಪ್ಪದೇ, ನಮಗೆ ವೇತನ ಪಾವತಿಯಾಗಬೇಕು. ಆಗಲೇ ನಾವು ಪ್ರತಿಭಟನೆ ಹಿಂತೆಗೆಯುವುದಾಗಿ ಪಟ್ಟು ಹಿಡಿದರು.
ಕೊನೆಗೆ ಗ್ಯಾಂಗಮನ್‌ಗಳಿಗೆ ಆಗಿರುವ ತೊಂದರೆ ಮತ್ತು ಅವರ ಪ್ರತಿಭಟನೆಯಿಂದ ಕೊನೆ ಭಾಗಕ್ಕೆ ನೀರು ಮುಟ್ಟದಿರುವ ಕುರಿತು ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಕೊನೆ ಭಾಗಕ್ಕೆ ನೀರು ಮುಟ್ಟದಿರುವುದು ಮತ್ತು ಗ್ಯಾಂಗ್‌ಮನ್‌ಗಳಿಗೆ 4 ತಿಂಗಳಿಂದ ವೇತನ ಬಾರದಿರುವುದು ಕೂಡಾ ಗಂಭೀರವಾದ ವಿಷಯ. ಕೂಡಲೇ ನೀರಾವರಿ ಇಲಾಖೆ ಉನ್ನತ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಗುತ್ತಿಗೆದಾರರಿಗೆ ಮಾತನಾಡಿ ವೇತನ ಪಾವತಿಸುವಂತೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದರು. ಆಗ ಸಚಿವರು ಶನಿವಾರದೊಳಗೆ ಬಾಕಿ ವೇತನ ಪಾವತಿಗೆ ಕ್ರಮಕೈಗೊಳ್ಳುವ ಭರವಸೆ ಕೊಟ್ಟರು.