ಅರ್ಕಾವತಿ ರಿವರ್ ಫ್ರಂಟ್ ಅಭಿವೃದ್ಧಿಗೆ ಗ್ರೀನ್ ಸಿಗ್ನಲ್

KannadaprabhaNewsNetwork | Published : Mar 9, 2024 1:31 AM

ಸಾರಾಂಶ

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಹರಿಯುವ ಅರ್ಕಾವತಿ ನದಿ ದಡವನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ರಾಜ್ಯಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಹರಿಯುವ ಅರ್ಕಾವತಿ ನದಿ ದಡವನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ರಾಜ್ಯಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಕಾವೇರಿ ನೀರಾವರಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ್ದ ರಾಮನಗರ ಪಟ್ಟಣ ವ್ಯಾಪ್ತಿಯಲ್ಲಿ ಅರ್ಕಾವತಿ ರಿವರ್ ಫ್ರಂಟ್ ಅಭಿವೃದ್ಧಿ ಪಡಿಸುವ ಕಾಮಗಾರಿಯ 156 ಕೋಟಿ ಮೊತ್ತದ ಯೋಜನಾ ವರದಿಗೆ ಜಲಸಂಪನ್ಮೂಲ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಯಾವುದೇ ನಗರ ಪ್ರದೇಶಗಳ ಮಧ್ಯ ಭಾಗದಲ್ಲಿ ನದಿಗಳು ಹರಿದರೆ ಆ ನಗರಗಳು ಅಭಿವೃದ್ಧಿ ಹೊಂದುವ ಜತೆಗೆ ಪ್ರಸಿದ್ಧಿಯನ್ನೂ ಪಡೆಯುತ್ತವೆ ಎನ್ನುವ ಮಾತಿದೆ. ಆದರೆ, ಅರ್ಕಾವತಿ ನದಿ ವಿಚಾರದಲ್ಲಿ ರಾಮನಗರದ ಪಾಲಿಗೆ ಇದು ಸುಳ್ಳಾಗಿತ್ತು. ಈಗ ರಾಜ್ಯಸರ್ಕಾರ ಅರ್ಕಾವತಿ ನದಿಯ ಇಕ್ಕೆಲಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಸೌಂದರ್ಯಿಕರಣ ಮಾಡಲು ಮುಂದಾಗಿರುವುದು ದಶಕಗಳ ಕನಸು ನನಸಾಗುತ್ತಿದೆ.

ಅರ್ಕಾವತಿ ನದಿ ದಡ ಅಭಿವೃದ್ಧಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್‌ ಹಾಗೂ ಶಾಸಕ ಇಕ್ಬಾಲ್ ಹುಸೇನ್ ವಿಶೇಷ ಕಾಳಜಿ ವಹಿಸಿದ್ದರು. ಅವರ ಸೂಚನೆಯಂತೆ ಕಾವೇರಿ ನೀರಾವರಿ ನಿಗಮ ಅರ್ಕಾವತಿ ನದಿ ಎಡ - ಬಲ ದಂಡೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದಕ್ಕೆ ರಾಜ್ಯ ಸರ್ಕಾರ ಕೊನೆಗೂ ಅನುಮೋದನೆ ನೀಡಿದೆ.

ಅರ್ಕಾವತಿ ನದಿಯು ನಗರದ ಮಧ್ಯ ಭಾಗದಲ್ಲಿ ಸುಮಾರು 4 ಕಿ.ಮೀ.ಉದ್ದ ಹರಿದು ಹೋಗುತ್ತದೆ. ನದಿಯು ಒಳ ಚರಂಡಿ ನೀರಿನಿಂದ ಕಲುಷಿತಗೊಳ್ಳುವ ಜೊತೆಗೆ ಲಾಳದ ಕಡ್ಡಿ, ಜೊಂಡು ಮುಂತಾದ ತ್ಯಾಜ್ಯಗಿಡಗಳು ಬೆಳೆದು ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ಹೀಗಾಗಿ ನಗರದ ಮಧ್ಯಭಾಗದಲ್ಲಿ ಹರಿಯುತ್ತಿರುವ ಅರ್ಕಾವತಿ ನದಿಯ ಎಡ - ಬಲ ದಂಡೆಯಲ್ಲಿ ವಾಕಿಂಗ್ ಪಾಥ್ ನಿರ್ಮಿಸಿ ಅದರ ಸೌಂದರ್ಯ ಹೆಚ್ಚಿಸಿ, ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಲು 156 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ.

ಪ್ರಸ್ತಾವನೆಯಲ್ಲಿ ಏನಿದೆ ?:

ರಾಮನಗರದ ದ್ಯಾವರಸೆಗೌಡನದೊಡ್ಡಿಯ ಸೇತುವೆಯಿಂದ ಕನಕಪುರ ಸರ್ಕಲ್ ವರೆಗಿನ ಅರ್ಕಾವತಿ ನದಿಯ ಎಡ ಭಾಗದಲ್ಲಿ ಸುಮಾರು 1.59 ಕಿ.ಮೀ. ಹಾಗೂ ನದಿಯ ಬಲಭಾಗದಲ್ಲಿ ಸುಮಾರು 1.79 ಕಿ.ಮೀ ಒಟ್ಟಾರೆಯಾಗಿ 3.38 ಕಿ.ಮೀ ಉದ್ದಕ್ಕೆ ತಡೆಗೋಡೆ ನಿರ್ಮಿಸುವುದು. ಇದಲ್ಲದೇ ನಗರ ಹಾಗೂ ಇತರೆ ಭಾಗಗಳಿಂದ ಬರುವ ಪ್ರವಾಸಿಗರ ಮನೋರಂಜನೆ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಿತಕರ ವಾತಾವರಣ ಕಲ್ಪಿಸಲು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವುದು. ಪ್ರವೇಶ ದ್ವಾರ ಮತ್ತು ಶೌಚಾಲಯಗಳ ನಿರ್ಮಾಣ. ಉದ್ಯಾನವನ ಅಭಿವೃದ್ಧಿ, ನೀರಿನ ಕಾರಂಜಿಗಳ ಅಭಿವೃದ್ಧಿ ಸೇರಿದಂತೆ ಅನೇಕ ಕಾಮಗಾರಿಗಳನ್ನು ಒಳಗೊಂಡಿದೆ.

ಬಾಕ್ಸ್ ................

ನೆನೆಗುದಿಗೆ ಬಿದ್ದ ನದಿಮುಖಿ ಅಭಿವೃದ್ಧಿ ಯೋಜನೆ

ಈ ಮೊದಲು 2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 250 ಕೋಟಿ ರುಪಾಯಿ ವೆಚ್ಚದಲ್ಲಿ ಅರ್ಕಾವತಿ ನದಿ ದಡವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನದಿಮುಖಿ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದರು. ಇದಕ್ಕಾಗಿ ಕಾವೇರಿ ನೀರಾವರಿ ನಿಗಮ ಹಾಗೂ ಸ್ಥಳೀಯ ಸಂಸ್ಥೆ ಜಂಟಿಯಾಗಿ ಯೋಜನೆ ಕೂಡ ರೂಪಿಸಿದ್ದರು.

ಅಧಿಕಾರಿಗಳು ಗುಜರಾತಿನ ಸಾಬರಮತಿ ಆಶ್ರಮ ಹಾಗೂ ಶಿವಮೊಗ್ಗ ನಗರದಲ್ಲಿ ಅನುಷ್ಠಾನದ ಹಂತದಲ್ಲಿದ್ದ ತುಂಗಾ ನದಿ ಮುಖಿ ಅಭಿವೃದ್ಧಿ ಯೋಜನೆ ಮಾದರಿಗಳನ್ನು ಅಧ್ಯಯನ ಮಾಡಿ ಯೋಜನಾ ವರದಿ ಸಿದ್ದಪಡಿಸಿದ್ದರು. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಅದು ನೆನೆಗುದಿಗೆ ಬಿದ್ದಿತು.

ಆದರೀಗ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಆಶಯದಂತೆ ಅರ್ಕಾವತಿ ರಿವರ್ ಫ್ರಂಟ್ ಅಭಿವೃದ್ಧಿ ಪಡಿಸುವ 156 ಕೋಟಿ ಮೊತ್ತದ ಯೋಜನಾ ವರದಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ರಾಜ್ಯಸರ್ಕಾರದಿಂದ ಅನುಮೋದನೆ ಕೊಡಿಸಿದ್ದಾರೆ.

ಬಾಕ್ಸ್ ..............

ನದಿ ದಡದಲ್ಲಿ ಏನೇನು ಇರಲಿದೆ ?

ನಗರ ವ್ಯಾಪ್ತಿಯಲ್ಲಿ ನದಿಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದು. ಎರಡೂ ದಡದಲ್ಲಿ ಪಾಥ್ ವೇ, ಉದ್ಯಾನವನ, ಒಳಚರಂಡಿ ನೀರು ಹರಿಯಲು ಪ್ರತ್ಯೇಕ ಡ್ರೈನೇಜ್ ವ್ಯವಸ್ಥೆ. ಕಾರಾಂಜಿ, ಅತ್ಯಾಧುನಿಕ ವಿದ್ಯುತ್ ದೀಪಾಲಂಕಾರ, ಯೋಗ ಕೇಂದ್ರ, ಜಿಮ್‌ , ಪಾರ್ಕಿಂಗ್ ವ್ಯವಸ್ಥೆ, ಮಕ್ಕಳ ಆಟಿಕೆಗಳು, ಬೋಟಿಂಗ್‌ ವ್ಯವಸ್ಥೆ ಕಲ್ಪಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದು.ಕೋಟ್‌ ............

ಅರ್ಕಾವತಿ ನದಿ ನಗರದ ಮಧ್ಯ ಭಾಗದಲ್ಲಿ ಹರಿಯುತ್ತಿರುವ ಕಾರಣ ಉತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸಲು ಅವಕಾಶ ಇತ್ತು. ಇಲ್ಲಿವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದವರು ಅದರ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ, ಸಂಸದ ಡಿ.ಕೆ.ಸುರೇಶ್ ನದಿಯ ಇಕ್ಕೆಲಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಲು ವಿಶೇಷ ಆಸಕ್ತಿ ತೋರಿದ್ದಾರೆ. ಬಫರ್‌ ಜೋನ್‌ ಜೊತೆಗೆ ಒತ್ತುವರಿ ತೆರವುಗೊಳಿಸಿ ಆಕರ್ಷಕ ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು.

- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ(ಒಂದೇ ಫೋಟೊ ಬಳಸಿದರೂ ಒಕೆ)

8ಕೆಆರ್ ಎಂಎನ್‌ 4,5,6.ಜೆಪಿಜಿ

4,5.ಅರ್ಕಾವತಿ ನದಿ ಚಿತ್ರಣ

6.ಶಾಸಕ ಇಕ್ಬಾಲ್ ಹುಸೇನ್ .

Share this article