ದೇಶದ ಬೆನ್ನುಲು ಅನ್ನದಾತರ ಬದುಕನ್ನು ಕಟ್ಟಿಕೊಡುವ ಕಾರ್ಯವನ್ನು ಹಸಿರಿನೊಂದಿಗೆ ಮಾತುಕತೆ ಬಳಗ ಮಾಡಿದೆ.
ಹೊಸಪೇಟೆ: ದೇಶದ ಬೆನ್ನುಲು ಅನ್ನದಾತರ ಬದುಕನ್ನು ಕಟ್ಟಿಕೊಡುವ ಕಾರ್ಯವನ್ನು "ಹಸಿರಿನೊಂದಿಗೆ ಮಾತುಕತೆ ಬಳಗ " ಮಾಡಿದೆ. ಜಿಲ್ಲೆಯ ರೈತರನ್ನು ಮಾತನಾಡಿಸಿ ಹಸಿರು ಮಾತುಕತೆ ಎಂಬ ನೈಜ ಪುಸ್ತಕವನ್ನು ಹೊರ ತಂದಿರುವುದು ಉತ್ತಮ ಕಾರ್ಯವಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಜಿಲ್ಲಾ ಕೃಷಿ ಇಲಾಖೆ ಹಾಗೂ ಹಸಿರಿನೊಂದಿಗೆ ಮಾತುಕತೆ ಬಳಗ ಹೊರ ತಂದ ಹಸಿರು ಮಾತುಕತೆ ಪುಸ್ತಕವನ್ನು ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರೈತರ ಸಂಕಷ್ಟಗಳಿಗೆ ಎಲ್ಲರೂ ಸ್ಪಂದಿಸಬೇಕು. ಅವರನ್ನು ಸಮಸ್ಯೆಯಿಂದ ಹೊರ ತರುವ ಕೆಲಸ ಮಾಡಬೇಕು. ರೈತರು ಹಾಗೂ ಕೃಷಿ ಕೂಲಿಕಾರ್ಮಿಕರು ಕೂಡ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿ ನಿಲ್ಲಬೇಕು. ಸರ್ಕಾರಗಳ ಯೋಜನೆಗಳು ಅರ್ಹ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ಈ ಪುಸ್ತಕ ವಿಜಯನಗರ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳಿಗೂ ಸಹಕಾರಿಯಾಗಲಿದೆ. ಜೊತೆಗೆ ರೈತರ ಸಂಕಷ್ಟಗಳನ್ನು ಅರಿಯಲು ಕೂಡ ಸಹಕಾರಿಯಾಗಲಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ಮಾತನಾಡಿ, ಜಿಲ್ಲೆಯ ಎಲ್ಲಾ ಅರ್ಹ ರೈತರಿಗೆ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ರೈತರ ಜಮೀನುಗಳಿಗೆ ತೆರಳಿ ಸಲಹೆ ನೀಡುತ್ತಿದ್ದಾರೆ. ಜೊತೆಗೆ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ ಎಂದರು.
ಗಂಗಾವತಿ ಕೆವಿಕೆಯ ಕೀಟಶಾಸ್ತ್ರಜ್ಞ ಟಿ.ಭದ್ರಿಪ್ರಸಾದ್ ಪುಸ್ತಕದ ಕುರಿತು ಮಾತನಾಡಿದರು.
ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆ ಆರ್.ದೊರೆಸ್ವಾಮಿ, ಹಗರಿ ಕೆವಿಕೆಯ ಗೃಹವಿಜ್ಞಾನಿ ಆರ್.ಶಿಲ್ಪಾ, ಪ್ರಗತಿಪರ ರೈತ ಎಸ್‌ಎಚ್‌ಎಂ ಬಸಯ್ಯಸ್ವಾಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೈತ ವಿಶ್ವೇಶ್ವರ ಸಜ್ಜನ, ಪ್ರಗತಿಪರ ರೈತ ಬಿ.ಚಂದ್ರಶೇಖರ್, ಹಸಿರು ಮಾತುಕತೆ ಬಳಗದ ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತಿತರರಿದ್ದರು.
ರೈತ ವಸಂತ ಮಾಲ್ವಿ, ಕೃಷಿ ಇಲಾಖೆಯ ಪರಮೇಶ್ವರ ನಾಯ್ಕ ನಿರ್ವಹಿಸಿದರು. ಕೃಷಿ ಇಲಾಖೆಯ ಕಚೇರಿ ಆವರಣದಲ್ಲಿ ಶಾಸಕ ಎಚ್.ಆರ್. ಗವಿಯಪ್ಪ ಸಸಿ ನೆಟ್ಟರು. ಬಳಿಕ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.