ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಹಸಿರು ಗ್ರಾಮ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಅಭಿಯಾನದಡಿ ಬಯಲು ಸೀಮೆಗೆ ಅನುಗುಣವಾಗಿರುವ 24 ಜಾತಿಯ 3.5 ಲಕ್ಷ ಸಸಿಗಳನ್ನು ನೆಟ್ಟು, ಪೋಷಿಸಿ ಬೆಳೆಸುವ ದೃಢ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ತಿಳಿಸಿದರು.ಕೊರಟಗೆರೆ ತಾಲೂಕಿನ ಬೂದಗವಿ ಗ್ರಾಮ ಪಂಚಾಯತಿ ಹೊರವಲಯದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆ ಆವರಣದಲ್ಲಿ ಹಸಿರು ಗ್ರಾಮ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲೆಯು ಬಯಲುಸೀಮೆ ಪ್ರದೇಶವನ್ನೊಳಗೊಂಡಿರುವುದರಿಂದ ಮರಗಳನ್ನು ಬೆಳೆಸಿ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಸಹಭಾಗಿತ್ವದಲ್ಲಿ ೩.೫ ಲಕ್ಷ ಮರಗಳನ್ನು ಬೆಳೆಸುವ ಬಹುದೊಡ್ಡ ಅಭಿಯಾನ ಇದಾಗಿದೆ ಎಂದು ತಿಳಿಸಿದರು.ಈಗಾಗಲೇ ಸದೃಢವಾಗಿ ಬೆಳೆದಿರುವ ಸಸಿಗಳು ಸಿದ್ಧವಿದ್ದು, ಮಳೆಗಾಲ ಮುಗಿಯುವ ವೇಳೆಗೆ ಸಸಿಗಳನ್ನು ನೆಡಬೇಕಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1 ಸಾವಿರ ಗಿಡಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಪೋಷಣೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ. ಗಿಡಗಳನ್ನು ಬೆಳೆಸುವ ಜವಾಬ್ದಾರಿಯನ್ನು ಸಾಮಾಜಿಕ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿಗೆ ವಹಿಸಲಾಗಿದೆ ಎಂದರು.ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ಮಾತನಾಡಿ, ಜಿಲ್ಲೆಯಾದ್ಯಂತ 3.5 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಇವುಗಳನ್ನು ಮೂರು ವರ್ಷಗಳ ಕಾಲ ಸದೃಢವಾಗಿ ಬೆಳೆಸುವ ಪಣವನ್ನು ತೊಡಲಾಗಿದೆ ಎಂದು ಹೇಳಿದರು. ಮುಖ್ಶಕಾರ್ಯನಿರ್ವಾಹಕ ಅಧಿಕಾರಿ ಶಾಲಾ ಮಕ್ಕಳೊಂದಿಗೆ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊರಟಗೆರೆ ತಾಲೂಕು ಪಂಚಾಯತಿ ಕಾರ್ಯನಿರ್ವಾಕ ಅಧಿಕಾರಿ, ಸಹಾಯಕ ನಿರ್ದೇಶಕರು, ವಲಯ ಅರಣ್ಯಾಧಿಕಾರಿ, ಶಿಕ್ಷಕರು, ಶಾಲಾ ಮಕ್ಕಳು, ಸ್ಥಳೀಯರು ಭಾಗವಹಿಸಿದ್ದರು.