ಕಸದ ಬ್ಲಾಕ್‌ಸ್ಪಾಟ್‌ಗಳ ಮೇಲೆ ಸಸಿ, ಚಿತ್ತಾರದ ರಂಗು

KannadaprabhaNewsNetwork |  
Published : Sep 30, 2024, 01:28 AM ISTUpdated : Sep 30, 2024, 01:29 AM IST
ಹುಬ್ಬಳ್ಳಿಯ ಈಶ್ವರ ನಗರದಲ್ಲಿದ್ದ ಬ್ಲಾಕ್‌ಸ್ಪಾರ್ಟ್‌ ಜಾಗದಲ್ಲಿ ಸಂಗ್ರಹಗೊಂಡಿದ್ದ ಕಸವನ್ನು ಸಾರ್ವಜನಿಕರೇ ತೆರವುಗೊಳಿಸಿ ಬಗೆಬಗೆಯ ಸಸಿಗಳನ್ನು ಹಚ್ಚಿರುವುದು. | Kannada Prabha

ಸಾರಾಂಶ

ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ಜನರ ಹತ್ತಿರ ಹೋಗುತ್ತಿದ್ದಾರೆ. ಕಸ ಎಸೆಯುವ ಜಾಗವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸುವುದು, ಬಗೆಬಗೆಯ ಸಸಿಗಳನ್ನು ನೆಡುವ ಕಾರ್ಯ ಕೈಗೊಳ್ಳುದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ನಗರದ ಸೌಂದರೀಕರಣಕ್ಕೆ ಮಾರಕವಾಗಿರುವ ಈ ಬ್ಲಾಕ್‌ ಸ್ಪಾಟ್‌ (ಕಸ ಎಸೆಯುವ ಪ್ರದೇಶ) ತೆರವಿಗೆ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ಜನರ ಹತ್ತಿರ ಹೋಗುತ್ತಿದ್ದಾರೆ. ಕಸ ಎಸೆಯುವ ಜಾಗವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸುವುದು, ಬಗೆಬಗೆಯ ಸಸಿಗಳನ್ನು ನೆಡುವ ಕಾರ್ಯ ಕೈಗೊಳ್ಳುದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು 82 ವಾರ್ಡ್‌ಗಲ್ಲೂ ನಿತ್ಯ ಕಸ ಸಂಗ್ರಹ ವಾಹನಗಳ ವ್ಯವಸ್ಥೆ ಕಲ್ಪಿಸಿದರೂ ಜನರು ಇಂದಿಗೂ ಎಲ್ಲೆಂದರಲ್ಲಿ ಕಸ ಬಿಸಾಡುವ ಮೂಲಕ ಮಹಾನಗರದ ಸೌಂದರ್ಯ ಹಾಳಾಗುವಂತೆ ಮಾಡುತ್ತಿದ್ದಾರೆ. ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಜನರಲ್ಲಿ ಅರಿವು ಮೂಡದೇ ಇರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

167 ಕಡೆಗಳಲ್ಲಿ ಸಿಸಿ ಕ್ಯಾಮೆರಾ

ಕಳೆದ 2022ರಲ್ಲಿ ಹು-ಧಾ ಮಹಾನಗರದಾದ್ಯಂತ 650 ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿತ್ತು. ಇದರಲ್ಲಿ 167 ಸ್ಥಳಗಳನ್ನು ಪ್ರಮುಖ ಸ್ಥಳಗಳೆಂದು ಗುರುತಿಸಿ, ಅಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಸಾರ್ವಜನಿಕರು ಕಸ ಎಸೆಯದಂತೆ ನಿಗಾ ವಹಿಸಲಾಗಿದೆ. ಅಲ್ಲದೇ ಹಲವು ಕಡೆಗಳಲ್ಲಿದ್ದ ಬ್ಲಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸಿ ಮತ್ತೆ ಕಸ ಎಸೆಯದಂತೆ ವಾರ್ಡ್‌ ನಿವಾಸಿಗಳಿಗೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಎರಡೇ ವರ್ಷಗಳಲ್ಲಿ 420 ಬ್ಲಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸಲಾಗಿದೆ. ಇನ್ನುಳಿದ 230 ಬ್ಲಾಕ್‌ ಸ್ಪಾಟ್‌ಗಳ ತೆರವಿಗೂ ಈಗ ಹಲವು ಕಾರ್ಯಕ್ರಮಗಳನ್ನು ಪಾಲಿಕೆ ಹಾಕಿಕೊಂಡಿದೆ.

ತಾಯಿಯ ಹೆಸರಲ್ಲಿ ಸಸಿ

ಮಹಾನಗರ ಪಾಲಿಕೆ ಸ್ಥಳೀಯ ವಾರ್ಡ್‌ ಸದಸ್ಯರ, ನಿವಾಸಿಗಳ, ಸ್ವಸಹಾಯ ಸಂಘ, ವಿದ್ಯಾರ್ಥಿಗಳ ಸಹಕಾರದೊಂದಿಗೆ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಬ್ಲಾಕ್‌ ಸ್ಪಾಟ್‌ ಇರುವ ಜಾಗವನ್ನು ಸ್ವಚ್ಛಗೊಳಿಸಿ, ಅದೇ ಸ್ಥಳದಲ್ಲಿ ತಾಯಿಯ ಹೆಸರಿನಲ್ಲಿ ಸಸಿ ನೆಟ್ಟು ಪೋಷಣೆ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಬಣ್ಣಬಣ್ಣದ ರಂಗೋಲಿ ಹಾಕುವುದು, ಆಯಾ ವಾರ್ಡ್‌ಗಳಲ್ಲಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಸ ಎಸೆಯದಂತೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.

ದಂಡದ ಎಚ್ಚರಿಕೆ

ಇನ್ನು ಕೆಲವು ಕಡೆಗಳಲ್ಲಿ ಅಲ್ಲಿನ ನಿವಾಸಿಗಳೇ ಬ್ಲಾಕ್‌ ಸ್ಪಾಟ್‌ ಇರುವ ಜಾಗ ಶುಚಿಗೊಳಿಸಿ ಅಲ್ಲಿ ಬಗೆಬಗೆಯ ಸಸಿಗಳನ್ನು ನೆಟ್ಟು ಪೋಷಿಸುವುದರೊಂದಿಗೆ, ಕಸ ಎಸೆಯದಂತೆ ಫಲಕಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಕಸ ಎಸೆದರೆ ದಂಡ ವಿಧಿಸುವ ಎಚ್ಚರಿಕೆಯ ಫಲಕ ಸಹ ಹಾಕಲಾಗಿದೆ.

ಸೆ. 23ರಿಂದ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಕಳೆದ ಸೆ. 23ರಂದು ತಾಯಿಯ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದೇ ಮಾದರಿಯಲ್ಲಿ ಮಹಾನಗರದ 82 ವಾರ್ಡ್‌ಗಳಲ್ಲಿರುವ 230 ಬ್ಲಾಕ್‌ ಸ್ಪಾಟ್‌ಗಳಲ್ಲಿಯೂ ಕಸ ತೆರವುಗೊಳಿಸಿ ಸ್ಥಳಿಯರಿಂದಲೇ ತಾಯಿಯ ಹೆಸರಿನಲ್ಲಿ ಸಸಿ ನೆಡುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈಗಾಗಲೇ 138 ಕಡೆಗಳಲ್ಲಿರುವ ಬ್ಲಾಕ್‌ ಸ್ಪಾರ್ಟ್‌ಗಳನ್ನು ತೆರವುಗೊಳಿಸಿ ಅಲ್ಲಿ ರಂಗೋಲಿ, ಸಸಿಗಳನ್ನು ಹಚ್ಚಲಾಗಿದೆ. ಅ. 2ರೊಳಗೆ ಇನ್ನುಳಿದ ಬ್ಲಾಕ್‌ಸ್ಪಾರ್ಟ್‌ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹು-ಧಾ ಮಹಾನಗರ ಪಾಲಿಕೆಯ ಘನತ್ಯಾಜ್ಯ ವಸ್ತು ನಿರ್ವಹಣೆಯ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಬಿ.ಎಂ. ''''ಕನ್ನಡಪ್ರಭ''''ಕ್ಕೆ ತಿಳಿಸಿದರು.ಬಜಾಗೃತಿ ವಹಿಸಲಿ

ಎಲ್ಲೆಂದರಲ್ಲಿ ಕಸ ಹಾಕುವುದರಿಂದ ಪರಿಸರ ಹಾಳಾಗುತ್ತದೆ. ಈ ಕುರಿತು ಎಲ್ಲರೂ ಜಾಗೃತಿ ವಹಿಸಬೇಕಿದೆ. ಜನರೇ ಆಸಕ್ತಿ ವಹಿಸಿ ಬ್ಲಾಕ್‌ಸ್ಪಾರ್ಟ್‌ ಸ್ಥಳಗಳಲ್ಲಿ ಸಸಿ ನೆಡುತ್ತಿರುವುದು ಅಭಿನಂದನಾರ್ಹ. ಇವರೊಂದಿಗೆ ವಾರ್ಡ್ ಸಮಿತಿ ಬಳಗವೂ ಕೈಜೋಡಿಸುತ್ತಿದೆ.

ಲಿಂಗರಾಜ ಧಾರವಾಡಶೆಟ್ಟರ, ವಾರ್ಡ್‌ ಸಮಿತಿ ಬಳಗದ ಸದಸ್ಯ

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ