ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಆರಂಭ: ಶಾಸಕ ವಿಶ್ವಾಸ ವೈದ್ಯ

KannadaprabhaNewsNetwork |  
Published : Sep 10, 2024, 01:36 AM IST
ಸವದತ್ತಿಯ ಟಿಎಪಿಸಿಎಂಎಸ್ ಸೊಸೈಟಿಯಲ್ಲಿ ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಕೇಂದ್ರಕ್ಕೆ ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಟಿಎಪಿಸಿಎಂಎಸ್ ಸೊಸೈಟಿ ಅಧ್ಯಕ್ಷ ರವೀಂದ್ರ ಯಲಿಗಾರ ಇತರರು ಇದ್ದರು. | Kannada Prabha

ಸಾರಾಂಶ

ಸವದತ್ತಿ ತಾಲೂಕಿನಲ್ಲಿ ಈ ವರ್ಷ ಹೆಸರು ಬೆಳೆ ಹುಲುಸಾಗಿ ಬಂದಿದ್ದು, ಸೋಮವಾರದಿಂದಲೇ ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿಯಲ್ಲಿ ಹೆಸರು ಖರೀದಿ ಆರಂಭಿಸಲಾಗಿದೆ ಎಂದು ಶಾಸಕ ಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ತಾಲೂಕಿನಲ್ಲಿ ಈ ವರ್ಷ ಹೆಸರು ಬೆಳೆ ಹುಲುಸಾಗಿ ಬಂದಿದ್ದು, ಸೋಮವಾರದಿಂದಲೇ ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿಯಲ್ಲಿ ಹೆಸರು ಖರೀದಿ ಆರಂಭಿಸಲಾಗಿದೆ ಎಂದು ಶಾಸಕ ಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಸೊಸೈಟಿಯಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೋಮವಾರ ಹೆಸರು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕ್ವಿಂಟಲ್‌ಗೆ ₹ 8682 ರಂತೆ ಪ್ರತಿ ಎಕರೆಗೆ 2 ಕ್ವಿಂಟಲ್ ಹೆಸರನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದ್ದು, ಒಬ್ಬ ರೈತರಿಂದ ಗರಿಷ್ಠ 10 ಕ್ವಿಂಟಲ್‌ವರೆಗೆ ಖರೀದಿಗೆ ಅವಕಾಶ ಇದೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಸರ್ಕಾರ ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿಗೊಳಿಸಿ ಖರೀದಿ ಆರಂಭಿಸುತ್ತಿರುವುದರಿಂದ ಹೊರಗಡೆ ಮಾರುಕಟ್ಟೆಯಲ್ಲೂ ಬೆಳೆಗೆ ಉತ್ತಮ ಬೆಲೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಎಪಿಸಿಎಂಎಸ್ ಸೊಸೈಟಿ ಅಧ್ಯಕ್ಷ ರವೀಂದ್ರ ಯಲಿಗಾರ ಮಾತನಾಡಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳನ್ನು ನೋಂದಣಿ ಜೊತೆಗೆ ಇಂದಿನಿಂದಲೇ ಖರೀದಿ ಪ್ರಾರಂಭಿಸಲಾಗುತ್ತಿದೆ. ಅ.5ರವರೆಗೆ ನೋಂದಣಿಗೆ ಅವಕಾಶವಿದ್ದು, ನ.20ರವರೆಗೆ ಬೆಂಬಲ ಬೆಲೆಯಲ್ಲಿ ಹೆಸರನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ಎಕರೆಗೆ 4 ಕ್ವಿಂಟಲ್ ಖರೀದಿಗೆ ಅವಕಾಶವಿತ್ತು. ಆದರೆ, ಈಗ ಎಕರೆಗೆ 2 ಕ್ವಿಂಟಲ್‌ಗೆ ನಿಗದಿಗೊಳಿಸಿದ್ದರಿಂದ ರೈತರಿಗೆ ತೊಂದರೆಯಾಗಲಿದ್ದು, ಅದನ್ನು ಮೊದಲಿನಂತೆ 4 ಕ್ವಿಂಟಲ್‌ಗೆ ವಿಸ್ತರಿಸಬೇಕೆಂದರು.

ಎಪಿಎಂಸಿ ಅಧಿಕಾರಿ ಚೈತ್ರೇಶ ದಾಸರ ಮಾತನಾಡಿ, ಹೆಸರು ಹೆಸರು ಕಾಳನ್ನು ಸರಿಯಾಗಿ ಒಣಗಿಸಿ ಗುಣಮಟ್ಟದ ಕಾಳನ್ನು ಮಾರುಕಟ್ಟೆಗೆ ತರಬೇಕೆಂದರು.

ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಉಪಾಧ್ಯಕ್ಷ ಮಾರುತಿ ಬಸಲಿಗುಂದಿ, ಬಸವರಾಜ ಪುರದಗುಡಿ, ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ, ಸಹಕಾರ ಮಾರಾಟ ಮಂಡಳಿಯ ಶಾಖಾ ವ್ಯವಸ್ಥಾಪಕಿ ಗಾಯತ್ರಿ ಪವಾರ, ದೀಪಕ ಜಾನ್ವೇಕರ, ಬಸವರಾಜ ಗುರಣ್ಣವರ ಉಪಸ್ಥಿತರಿದ್ದರು.ವ್ಯವಸ್ಥಾಪಕ ಪ್ರಕಾಶ ಯಲಿಗಾರ ಸ್ವಾಗತಿಸಿದರು. ಚೈತ್ರೇಶ ದಾಸರ ನಿರೂಪಿಸಿ ವಂದಿಸಿದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು