ದೃಷ್ಟಿದೋಷ ಕೋಟಾ ಕೋರಿದ್ದ ವಿದ್ಯಾರ್ಥಿನಿಗೆ ಹೈಕೋರ್ಟ್‌ ಶಾಕ್‌

KannadaprabhaNewsNetwork | Published : Sep 10, 2024 1:36 AM

ಸಾರಾಂಶ

ವಿದ್ಯಾರ್ಥಿನಿಗೆ ದೃಷ್ಟಿದೋಷವಿಲ್ಲ ಎಂಬ ವೈದ್ಯರ ತ್ರಿಸದಸ್ಯ ಸಮಿತಿ ವರದಿಯನ್ನು ಅಂತಿಮವಾಗಿ ಪರಿಗಣಿಸಿದ ಹೈಕೋರ್ಟ್‌, ದೃಷ್ಟಿದೋಷ ಕೋಟಾದಡಿ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಕಲ್ಪಿಸಬೇಕೆಂಬ ವಿದ್ಯಾರ್ಥಿನಿ ಮನವಿ ತಿರಸ್ಕರಿಸಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ದೃಷ್ಟಿದೋಷ ಕೋಟಾದಡಿ ವೃತ್ತಿಪರ ಕೋರ್ಸ್‌ ಪ್ರವೇಶಾತಿ ಕೋರಿದ್ದ ವಿದ್ಯಾರ್ಥಿನಿಯ ದೃಷ್ಟಿದೋಷ ಪ್ರಮಾಣದ ಬಗ್ಗೆ ವೈದ್ಯರಿಂದ ವಿರೋಧಾಭಾಸ ಅಭಿಪ್ರಾಯಗಳು ವ್ಯಕ್ತವಾಗಿ ಗೊಂದಲ ಮೂಡಿದ ಪ್ರಕರಣದಲ್ಲಿ ವಿದ್ಯಾರ್ಥಿನಿಗೆ ದೃಷ್ಟಿದೋಷವಿಲ್ಲ ಎಂಬ ವೈದ್ಯರ ತ್ರಿಸದಸ್ಯ ಸಮಿತಿ ವರದಿಯನ್ನು ಅಂತಿಮವಾಗಿ ಪರಿಗಣಿಸಿದ ಹೈಕೋರ್ಟ್‌, ದೃಷ್ಟಿದೋಷ ಕೋಟಾದಡಿ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಕಲ್ಪಿಸಬೇಕೆಂಬ ವಿದ್ಯಾರ್ಥಿನಿ ಮನವಿ ತಿರಸ್ಕರಿಸಿದೆ.

ದೃಷ್ಟಿದೋಷ ಕೋಟಾದಡಿ ತನಗೆ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಕಲ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸುವಂತೆ ಕೋರಿ ಧಾರವಾಡದ ವಿದ್ಯಾರ್ಥಿನಿ ದಿಶಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ ಎ.ಪಾಟೀಲ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಪ್ರಕರಣದ ವಿವರ: 2024ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ದೃಷ್ಟಿದೋಷ ಕೋಟಾದಡಿ ಸೀಟು ಬಯಸಿ ಕೋರಿ ದಿಶಾ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರೆಗೆ ದೃಷ್ಟಿದೋಷವಿಲ್ಲ ಎಂದು ತಿಳಿಸಿ ಬೆಂಗಳೂರು ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ನೀಡಿದ್ದ ವರದಿ ಆಧರಿಸಿ ಸಂಭಾವ್ಯ ಪಟ್ಟಿಯಲ್ಲಿ ದೃಷ್ಟಿದೋಷ ಕೋಟಾದಡಿ ಸೀಟಿಗೆ ದಿಶಾ ಹೆಸರನ್ನು ಕೆಇಎ ಪರಿಗಣಿಸಿರಲಿಲ್ಲ.

ಇದರಿಂದ ಹೈಕೊರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ದಿಶಾ, ತಮಗೆ ಶೇ.40ರಷ್ಟು ದೃಷ್ಟಿ ದೋಷವಿದೆ ಎಂದು ತಿಳಿಸಿ ಧಾರವಾಡದ ಜಿಲ್ಲಾ ಸರ್ಜನ್‌ ಅವರು ವರದಿ ನೀಡಿರುವುದಾಗಿ ತಿಳಿಸಿದ್ದರು. ಅದನ್ನು ಪರಿಗಣಿಸಿ ಅರ್ಜಿದಾರರಿಗೆ ಸೀಮಿತವಾಗಿ ಕೆಇಎ ಪ್ರಕಟಿಸಿದ್ದ ಸಂಭಾವ್ಯ ಪಟ್ಟಿಯನ್ನು ರದ್ದುಪಡಿಸಿದ್ದ ಹೈಕೋರ್ಟ್‌, ಬಿಎಂಸಿಆರ್‌ಐ ಮುಂದೆ 2024ರ ಜು.10ರಂದು ಅರ್ಜಿದಾರೆ ಹಾಜರಾಗಬೇಕು. ಸಾಮಾಜಿಕ ನ್ಯಾಯ ಮತ್ತು ವಿಕಲಚೇತನರ ಬಲವರ್ಧನೆ ಸಚಿವಾಲಯವು 2024ರ ಮಾ.12ರಂದು ಹೊರಡಿಸಿದ್ದ ಅಧಿಸೂಚನೆಯ ಮಾರ್ಗಸೂಚಿಗಳನ್ನು ಅನುಸರಿಸಿ ಅರ್ಜಿದಾರರ ದೃಷ್ಟಿದೋಷದ ಬಗ್ಗೆ ಮರು ಮೌಲ್ಯಮಾಪನ ಮಾಡಬೇಕು ಎಂದು ನಿರ್ದೇಶಿಸಿತ್ತು.

ಅದರಂತೆ ಬಿಎಂಸಿಆರ್‌ಐ ವೈದ್ಯಕೀಯ ಬೋರ್ಡ್‌ ಅರ್ಜಿದಾರೆಯ ಕಣ್ಣಿನ ಪರೀಕ್ಷೆ ನಡೆಸಿ, ಆಕೆಗೆ ದೃಷ್ಟಿದೋಷವಿಲ್ಲ ಎಂದು ಮತ್ತೆ ಹೇಳಿತ್ತು. ಇದರಿಂದ ದಿಶಾ ಎರಡನೇ ಬಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಬಿಎಂಸಿಆರ್‌ಐ ವರದಿ ದುರುದ್ದೇಶಪೂರಿತವಾಗಿದೆ. ತಾನು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೆ.83.33ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದೇನೆ. ತನಗೆ ಶೆ.40ಕ್ಕಿಂತ ಅಧಿಕ ಪ್ರಮಾಣ ದೃಷ್ಟಿ ದೋಷವಿದೆ.. ಇದರಿಂದ ಅಂಗವೈಕಲ್ಯ ಕೋಟಾದಡಿ (ದೃಷ್ಟಿ ದೋಷ ವರ್ಗ) ಪ್ರವೇಶ ಪಡೆಯಲು ಅರ್ಹನಾಗಿದ್ದೇನೆ ಎಂದು ವಾದಿಸಿದ್ದರು.

ವೈದ್ಯರ ಅಭಿಪ್ರಾಯ ವಿಭಿನ್ನ: ಇದರಿಂದ ಅರ್ಜಿದಾರೆಯ ನೇತ್ರ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ನೇತ್ರಶಾಸ್ತ್ರದ ಸರ್ಜನ್‌ಗೆ 2024ರ ಜು.22ರಂದು ಹೈಕೋರ್ಟ್‌ ನಿರ್ದೇಶಿಸಿತ್ತು. ಅದರಂತೆ ಜು.22ರಂದು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ಮೂವರು ತಜ್ಞರು ತಪಾಸಣೆ ನಡೆಸಿ, ಅರ್ಜಿದಾರೆಯು ಶೇ.40ರಷ್ಟು ದೃಷ್ಟಿ ದೋಷ ಹೊಂದಿರುವುದಾಗಿ ಜು.24ರಂದು ವರದಿಯಲ್ಲಿ ಸಲ್ಲಿಸಿತ್ತು.

ಅದನ್ನು ಪರಿಗಣಿಸಿದ್ದ ಹೈಕೋರ್ಟ್‌, ಶೇ.40ರಷ್ಟು ದೃಷ್ಟಿ ದೋಷ ಹೊಂದಿದ ಅಭ್ಯರ್ಥಿಗಳಗೆ ಮೀಸಲಾಗಿರುವ ಸೀಟಿ ಪ್ರವೇಶಾತಿಯ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಜಿದಾರೆಗೆ ಅವಕಾಶ ಮಾಡಿಕೊಟ್ಟು ಅರ್ಜಿ ವಿಚಾರಣೆ ಮುಂದೂಡಿತ್ತು.

ಅಂತಿಮವಾಗಿ ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ಅರ್ಜಿದಾರೆಯನ್ನು ಕಣ್ಣಿನ ಪರೀಕ್ಷೆ ನಡೆಸಿದ್ದ ಬಿಎಂಸಿಆರ್‌ಐನ ನೇತ್ರಶಾಸ್ತ್ರದ ತಜ್ಞ ವೈದ್ಯರಾದ ಡಾ.ವೈ.ಡಿ. ಶಿಲ್ಪಾ ಡಾ.ಸೌಮ್ಯಾ ಶರತ್‌ ಮತ್ತು ಡಾ.ಎಸ್‌.ಎಂ. ಸಂಜನಾ ಅವರ ತ್ರಿಸದಸ್ಯ ಸಮಿತಿ, ಅರ್ಜಿದಾರೆಯ ಎರಡು ಕಣ್ಣಿನಲ್ಲೂ 6/18 ದೃಷ್ಟಿಯಿದೆ. ಇದರಿಂದ ಆಕೆಗೆ ದೃಷ್ಟಿ ದೋಷವಿಲ್ಲ ಎಂದು ತಿಳಿಸಿತ್ತು. ಅದನ್ನು ಪರಿಗಣಿಸಿದ ಹೈಕೋರ್ಟ್‌, ತ್ರಿಸದಸ್ಯ ಸಮಿತಿಯ ವೈದ್ಯರ ವರದಿಗೆ ಕಾನೂನುಬದ್ಧವಾದ ಮಾನ್ಯತೆಯಿದೆ ಎಂದು ತಿಳಿಸಿದ ಹೈಕೋರ್ಟ್‌ ಅರ್ಜಿ ವಜಾಗೊಳಿಸಿದೆ.

Share this article