ಇಕ್ಬಾಲ್ - ನಿಖಿಲ್‌ ಇಬ್ಬರಿಂದ ಅಹವಾಲು ಸ್ವೀಕಾರ

KannadaprabhaNewsNetwork |  
Published : Sep 24, 2026, 01:15 AM IST
1.ಶಾಸಕ ಇಕ್ಬಾಲ್ ಹುಸೇನ್ ರವರು ವಿಶೇಷ ಚೇತನರಿಂದ ಅವಹಾಲು ಆಲಿಸಿದರು. | Kannada Prabha

ಸಾರಾಂಶ

ರಾಮನಗರ: ಸೇವೆ ಕಾಯಂ ಮತ್ತು ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಅಂಗವಿಲಕರ ಹಾಗೂ ವಿವಿಧೋದ್ದೇಶ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಶಾಸಕ ಇಕ್ಬಾಲ್ ಹುಸೇನ್ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬುಧವಾರ ಭೇಟಿ ಮಾಡಿ ಅಹವಾಲು ಆಲಿಸಿದರು

ರಾಮನಗರ: ಸೇವೆ ಕಾಯಂ ಮತ್ತು ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಅಂಗವಿಲಕರ ಹಾಗೂ ವಿವಿಧೋದ್ದೇಶ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಶಾಸಕ ಇಕ್ಬಾಲ್ ಹುಸೇನ್ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬುಧವಾರ ಭೇಟಿ ಮಾಡಿ ಅಹವಾಲು ಆಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನವ ಕರ್ನಾಟಕ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಕುಳಿತಿರುವ ವಿಶೇಷಚೇತನರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಇಕ್ಬಾಲ್ ಹುಸೇನ್ ಮತ್ತು ನಿಖಿಲ್ ಕುಮಾರಸ್ವಾಮಿ ಬೇಡಿಕೆ ಈಡೇರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ರಾಜ್ಯಾದ್ಯಂತ 6,022ಕ್ಕೂ ಹೆಚ್ಚು ಅಂಗವಿಲಕರ ಹಾಗೂ ವಿವಿಧೋದ್ದೇಶ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿದ್ದಾರೆ. ಕಳೆದ 19 ವರ್ಷಗಳಿಂದ ಕೆಲಸ ಮಾಡುತ್ತಿರುವ ಅವರ ಸೇವೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ನಮ್ಮನ್ನು ಕಾಯಂಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪ್ರಸ್ತುತ ಸರ್ಕಾರ ನಮಗೆ ನೀಡುತ್ತಿರುವ ಗೌರವಧನ ‍ಪರಿಷ್ಕರಣೆ ಮಾಡಿ 5 ಸಾವಿರ ಏರಿಕೆ ಮಾಡಬೇಕು. ಕಾನೂನುಬದ್ಧವಾಗಿ ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಾಲಮಿತಿಯೊಳಗೆ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕರ್ತರ ಅನುಭವ ಮತ್ತು ಸ್ಥಳೀಯ ಸೇವಾ ಜಾಲವನ್ನು ಬಳಸಿಕೊಂಡು ವಿಕಲಚೇತನರ ಮನೆ ಬಾಗಿಲಿಗೆ ಸರ್ಕಾರವೇ ಅಭಿಯಾನ ರೂಪಿಸಿಬೇಕು. ಆ ಮೂಲಕ ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನನೆಗುದಿಗೆ ಬಿದ್ದ ಹೊಸ ತಾಲೂಕುಗಳಿಗೆ ಕಾರ್ಯಕರ್ತರ ನೇಮಿಸಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಬೇಕು.

ಬೇಡಿಕೆಗಳು:

ಅಂಗವಿಕಲರು ರಾಜ್ಯಾದ್ಯಂತ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ವಿತರಿಸಬೇಕು. ಶಾಸನಸಭೆಗಳಲ್ಲೂ ನಮಗೆ ಮೀಸಲಾತಿ ನೀಡುವ ಮೂಲಕ ರಾಜಕೀಯ ಅಧಿಕಾರ ನೀಡಬೇಕು. ಅಂಗವಿಕಲರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿ ಇಕ್ಬಾಲ್ ಹುಸೇನ್ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಉಭಯ ನಾಯಕರು ಬೇಡಿಕೆ ಈಡೇರಿಸಲು ಕ್ರಮ ವಹಿಸುತ್ತೇವೆ. ಅಲ್ಲಿವರೆಗೆ ಅನಿರ್ದಿಷ್ಟಾವಧಿ ಹೋರಾಟವನ್ನು ಕೈಬಿಡುವಂತೆ ವಿಶೇಷ ಚೇತನರಲ್ಲಿ ಮನವಿ ಮಾಡಿದರು. ಆದರೆ, ಇದಕ್ಕೆ ಬಗ್ಗದ ವಿಶೇಷಚೇತನರು

ಬೇಡಿಕೆ ಈಡೇರುವವರೆಗೂ ನಾವು ಬರಿಗೈಯಲ್ಲಿ ವಾಪಸ್ ಹೋಗುವುದಿಲ್ಲ. ರಾಜ್ಯ ಸರ್ಕಾರದಿಂದ ಬೇಡಿಕೆಗಳ ಈಡೇರಿಸಿರುವ ಆದೇಶ ಬರುವವರೆಗೂ ಇಲ್ಲೇ ಇರುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಾಕ್ಸ್ ................

ಅಧಿವೇಶನದಲ್ಲಿ ವಿಶೇಷಚೇತನರ ಪರ ಧ್ವನಿ ಎತ್ತುವೆ

ರಾಮನಗರ:

ನಿಮ್ಮ ಸಹೋದರನಾಗಿ ಪ್ರಸ್ತುತ ವಿಶೇಷ ಅಧಿವೇಶನದಲ್ಲಿ ವಿಶೇಷ ಚೇತನರ ಧ್ವನಿಯಾಗಿ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸ್ಥಳದಲ್ಲಿ ವಿಶೇಷ ಚೇತನರನ್ನು ಭೇಟಿಯಾಗಿ ಮಾತನಾಡಿದ ಇಕ್ಬಾಲ್ ಹುಸೇನ್, ನಿಮ್ಮ ಬೇಡಿಕೆಗಳ ಕುರಿತು ಶಾಸಕರೊಂದಿಗೆ ಚರ್ಚಿಸಿ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಗ್ರಾಮ, ತಾಲೂಕು, ನಗರಸಭೆ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೀರಿ. ಸರ್ಕಾರಿ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೀರಿ. ನೀವೆಲ್ಲರು ನನ್ನ ಕ್ಷೇತ್ರಕ್ಕೆ ಲಗ್ಗೆ ಹಾಕಿದ್ದೀರಿ. ನಿಮ್ಮ ಪರವಾಗಿ ನಿಲ್ಲಬೇಕಿರುವುದು ಧರ್ಮ. ಬೇಡಿಕೆಗಳ ಕುರಿತು ಚರ್ಚಿಸಲು ನೀವು ನಿಯೋಗದಲ್ಲಿ ಬಂದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಗೆ ಅವಕಾಶ ಕಲ್ಪಿಸುತ್ತೇನೆ ಎಂದು ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ಬಾಕ್ಸ್ .............

ಹೋರಾಟದ ಕೊನೆವರೆಗೂ ಜೊತೆ ಇರುತ್ತೇನೆ: ನಿಖಿಲ್

ರಾಮನಗರ: ನಿಮ್ಮ ಹೋರಾಟದ ಕೊನೆಯವರೆಗೂ ನಾನು ನಿಮ್ಮ ಜೊತೆ ಇರುತ್ತೇನೆ. ನೀವು ಯಾರೂ ಧೃತಿಗೆಡಬೇಡಿ. ನಿಮ್ಮ ಜೊತೆ ದೇವೇಗೌಡರ ಕುಟುಂಬ ಸದಾ ಇರುತ್ತದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡೀಸಿ ಕಚೇರಿ ಮುಂದೆ ವಿಕಲಚೇತನರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಈಗಿನ ಸರ್ಕಾರ ನಿಮ್ಮನ್ನು ಬೀದಿಗೆ ಬಿಟ್ಟಿದೆ. ಸರ್ಕಾರದ ಬಳಿ ಹಣವಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ. ಇಂತಹ ಸಂಪದ್ಭರಿತ ರಾಜ್ಯವನ್ನು ಈ ಸರ್ಕಾರ ದಿವಾಳಿ ಮಾಡಿದೆ ಎಂದು ಟೀಕಿಸಿದರು.

ಕಳೆದ ಹಲವು ತಿಂಗಳುಗಳಿಂದ ವಿಶೇಷ ಚೇತನರಿಗೆ ಮಾಸಾಶನ ಬಂದಿಲ್ಲ. ಗೌರವಧನ ಏರಿಕೆಯನ್ನೂ ಮಾಡುತ್ತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನಿಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಿಖಿಲ್ ಒತ್ತಾಯಿಸಿದರು.

(ಎರಡೂ ಫೋಟೋ ಬಳಸಿ)

23ಕೆಆರ್ ಎಂಎನ್ 1,2.ಜೆಪಿಜಿ

1.ಶಾಸಕ ಇಕ್ಬಾಲ್ ಹುಸೇನ್ ವಿಶೇಷ ಚೇತನರಿಂದ ಅವಹಾಲು ಆಲಿಸಿದರು.

2.ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶೇಷ ಚೇತನರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಸಜ್ಜಿತ ಪ್ರಜಾಸೌಧವಿದ್ದರೂ ಜನರಿಗಿಲ್ಲ ಸರ್ಕಾರಿ ಸೇವೆ
ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಶಾಸಕ ಅಲ್ಲಂಪ್ರಭು