ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗೃಹಲಕ್ಷ್ಮೀ ಯೋಜನೆಯಲ್ಲಿ ಜಿಲ್ಲೆಯ 2,61,415 ಮಂದಿ ಯಜಮಾನಿಯರಿಗೆ ₹52.28 ಕೋಟಿ ನೇರವಾಗಿ ಸಂದಾಯ ವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸಾರಿಗೆ ಸಂಸ್ಥೆಗೆ ಸರ್ಕಾರ ಶಕ್ತಿ ಯೋಜನೆಯಡಿ ಭರಪೂರ ಅನುದಾನ ಸರ್ಕಾರ ಬಿಡುಗಡೆ ಮಾಡಿರುವುದರಿಂದ ವಿಶೇಷವಾಗಿ ಮಾರ್ಚ್ ತಿಂಗಳಲ್ಲಿ ರಸ್ತೆ ಸಾರಿಗೆ ನಿಗಮದ 47 ಹೊಸ ಬಸ್‌ಗಳು ಜಿಲ್ಲೆಗೆ ಬಂದಿದ್ದು, ಅವುಗಳನ್ನು ಅಗತ್ಯವಿರುವ ಹಾಗೂ ಹೆಚ್ಚು ಜನದಟ್ಟಣೆ ಇರುವ ಮಾರ್ಗಗಳಲ್ಲಿ ಸಂಚರಿಸಲು ಒದಗಿಸಲಾಗುವುದು ಎಂದು ಹರ್ಷ ವ್ಯಕ್ತಪಡಿಸಿದರು.ಆದಾಯ ತೆರಿಗೆ ಪಾವತಿದಾರರು ಹಾಗೂ ಜಿಎಸ್ ಟಿ ಪಾವತಿದಾರ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಲಾಭವಾಗದಿರುವ ಬಗ್ಗೆ ಚರ್ಚಿಸಲಾಗಿದ್ದು, ಇದನ್ನು ಈ ಕುಟುಂಬಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು. ಅನ್ನಭಾಗ್ಯ ಯೋಜನೆಯಡಿ ಡಿ. 24ರವರೆಗೆ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು ಜಮಾ ಮಾಡಲಾಗುತ್ತಿದ್ದು, ಮಾರ್ಚ್ ತಿಂಗಳಿನಿಂದ ಫಲಾನುಭವಿಗಳಿಗೆ ಹಣದ ಬದಲಾಗಿ ತಲಾ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಜಿಲ್ಲೆಯ 531 ಪಡಿತರ ವಿತರಣಾ ಕೇಂದ್ರಗಳ ಮೂಲಕ ಜಿಲ್ಲೆಯ 8,01,536 ಜನರಿಗೆ ನೀಡಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಸವಿತಾ ಸಭೆಗೆ ತಿಳಿಸಿದರು. ಜಿಲ್ಲೆಯ 3,54,165 ಬಳಕೆದಾರರ (ಮೀಟರ್‌ಗಳು) ಪೈಕಿ 3,11,409 ಬಳಕೆದಾರರ (ಮೀಟರ್‌ಗಳು) ಸುಮಾರು ₹10 ಲಕ್ಷ ಜನರು ಉಚಿತವಾಗಿ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಮಾಹೆಯಾನ ₹11.79 ಕೋಟಿ ಗಳನ್ನು ಮೆಸ್ಕಾಂಗೆ ಭರಿಸುತ್ತಿದೆ ಎಂದು ಮೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಂಜುನಾಥ್ ಸಭೆಗೆ ತಿಳಿಸಿದರು. ಜನಸಂಪರ್ಕ ಸಭೆಯೂ ಸೇರಿದಂತೆ ಇಲಾಖೆ ಹಲವು ವಿಷಯಗಳ ಬಗ್ಗೆ ಸದಸ್ಯರು ಈ ಸಂದರ್ಭದಲ್ಲಿ ಚರ್ಚಿಸಿದರು.ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದುವರೆಗೂ 18,111 ಪದವೀಧರರೂ, 96 ಡಿಪ್ಲೊಮಾ ಪದವೀಧರರು ಯುವನಿಧಿಗೆ ಅರ್ಜಿ ಸಲ್ಲಿಸಿದ್ದು, ಅದಕ್ಕಾಗಿ ಇದುವರೆಗೆ ಸುಮಾರು ₹8 ಕೋಟಿ ಭರಿಸಲಾಗಿದೆ ಎಂದು ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ನದಾಫ್ ತಿಳಿಸಿದರು. ಶಕ್ತಿ ಯೋಜನೆಯಡಿ ಜಿಲ್ಲೆಯ ಬಸ್‌ಗಳಲ್ಲಿ ಜೂನ್ 2023 ರಿಂದ ಈವರೆಗೆ ಅಂದರೆ ಮಾರ್ಚ್ 2025 ರವರೆಗೆ ₹3.84 ಕೋಟಿ ಮಹಿಳೆಯರು ಉಚಿತವಾಗಿ ಸಂಚರಿಸಿದ್ದು, ₹147 ಕೋಟಿ ಗಳನ್ನು ಸರ್ಕಾರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೀಡಿದೆ ಎಂದು ನಿಗಮದ ಸಂಚಾರಿ ವಿಭಾಗದ ಅಧಿಕಾರಿ ಚನ್ನಬಸಪ್ಪ ತಿಳಿಸಿದರು. ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಗ್ಯಾರಂಟಿ ಯೋಜನೆಗಳ ನಾಮಫಲಕವನ್ನು ತೂಗು ಹಾಕಬೇಕೆಂದು ಸದಸ್ಯರು ಸಭೆ ಗಮನಕ್ಕೆ ತಂದಾಗ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ತಿಳಿಸಿದರು.ಪ್ರತೀ ತಿಂಗಳು ಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆಯುತ್ತಿದ್ದು, ತಾಲೂಕು ಸಮಿತಿಗಳು ತಾಲೂಕು ಮಟ್ಟದಲ್ಲಿ ಸಭೆ, ಸಂವಾದ, ಫಲಾನುಭವಿಗಳ ಸಮಾವೇಶಗಳನ್ನು ಅಲ್ಲಲ್ಲಿ ನಡೆಸುತ್ತಿರುವ ಬಗ್ಗೆ ಪ್ರಸ್ತಾಪಿಸಿ ಪ್ರಶಂಸಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಸಂಜೀವಿನಿ ಗುಂಪುಗಳನ್ನು ರಚಿಸುವಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಶಂಕರ್ ಕೊರವರ ಮಾತನಾಡಿ, ಪಂಚ ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಈಗಲೂ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಉಳಿದಿದ್ದು, ಅಧಿಕಾರಿಗಳು ಅದನ್ನು ಉಳಿಸಿಕೊಳ್ಳುವಲ್ಲಿ ಶ್ರಮ ವಹಿಸಬೇಕು ಎಂದರು.ಸಭೆಯಲ್ಲಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾದ ಡೈರಿ ಮಂಜಣ್ಣ, ಶಫೀವುಲ್ಲ, ಎಚ್.ಎಸ್.ಕೃಷ್ಣೇಗೌಡ, ಡಿ.ಜಿ. ಚಂದ್ರಮೌಳಿ, ಹೇಮಾವತಿ ಸೇರಿದಂತೆ ಪ್ರಾಧಿಕಾರದ ತಾಲೂಕು ಅಧ್ಯಕ್ಷರು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಎಚ್.ಜಿ.ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಭಜಂತ್ರಿ ಭಾಗವಹಿಸಿದ್ದರು.
24 ಕೆಸಿಕೆಎಂ 5ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.