ಸತ್ತವರ ಖಾತೆಗೆ ಗೃಹಲಕ್ಷ್ಮಿ ಹಣ; ಅಂಕೋಲಾದಲ್ಲಿ 352 ಪ್ರಕರಣ ಪತ್ತೆ
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾತಾಲೂಕಿನಲ್ಲಿ ಮೃತ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರಕ್ಕೆ ವಾಪಸ್ ಪಡೆಯುವ ಕಾರ್ಯಾಚರಣೆ ಚುರುಕುಗೊಂಡಿದೆ. ಫಲಾನುಭವಿಗಳು ಮೃತಪಟ್ಟ ಬಳಿಕವೂ ಅವರ ಖಾತೆಗೆ ಹಣ ಜಮೆಯಾಗಿರುವುದು ಪತ್ತೆಯಾಗಿದ್ದು, ಕೆಲ ಪ್ರಕರಣಗಳಲ್ಲಿ ಮೃತರ ಕುಟುಂಬದವರು ಹಣವನ್ನು ಹಿಂಪಡೆದು ಬಳಸಿಕೊಂಡಿರುವುದೂ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಇದೀಗ ಅಂತಹ ಹಣವನ್ನು ಸರ್ಕಾರಕ್ಕೆ ಮರುಪಾವತಿಸಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
ಇದೀಗ ಎರಡನೇ ಹಂತದ ಪರಿಶೀಲನೆಯಲ್ಲಿ ಮತ್ತೆ 236 ಮೃತ ಫಲಾನುಭವಿಗಳ ಹೆಸರು ಪತ್ತೆಯಾಗಿದೆ. ಈ ಪ್ರಕರಣಗಳಲ್ಲಿಯೂ ಕೆಲ ಮೃತ ಫಲಾನುಭವಿಗಳ ಕುಟುಂಬದವರು ಖಾತೆಗೆ ಜಮೆಯಾದ ಹಣವನ್ನು ಹಿಂಪಡೆದು ಖರ್ಚು ಮಾಡಿಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಹೀಗಾಗಿ ಹಣದ ವಸೂಲಾತಿ ಹಾಗೂ ಮೃತ ಫಲಾನುಭವಿಗಳ ಖಾತೆಗಳಿಗೆ ಮುಂದಿನ ಕಂತು ಜಮೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿರುವ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆ ಸರ್ಕಾರ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸುತ್ತಿದೆ. ಇದರ ಭಾಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಳಮಟ್ಟದಲ್ಲಿ ಮೃತರ ಮಾಹಿತಿಯನ್ನು ಸಂಗ್ರಹಿಸಿ ಗೃಹಲಕ್ಷ್ಮಿ ಪೋರ್ಟಲ್‌ನಲ್ಲಿ ದಾಖಲಿಸುವ ಕಾರ್ಯ ಕೈಗೊಂಡಿದೆ.
ಮೃತರ ಖಾತೆಗೆ ಹಣ ಜಮೆಯಾದ ಬಳಿಕ ಅದನ್ನು ಕುಟುಂಬದವರು ಅಥವಾ ಇತರರು ಹಿಂಪಡೆದಿರುವ ಸಾಧ್ಯತೆಯ ಹಿನ್ನೆಲೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಲೀಡ್ ಬ್ಯಾಂಕ್‌ಗೆ ಮಾಹಿತಿ ನೀಡಿ, ಸರ್ಕಾರಕ್ಕೆ ಹಣ ಮರುಜಮೆ ಮಾಡುವಂತೆ ಸೂಚಿಸಲು ಇಲಾಖೆ ಮುಂದಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಹಕಾರದೊಂದಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ ಭಟ್.