1054 ಮೃತ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಜಮೆ

KannadaprabhaNewsNetwork |  
Published : May 02, 2026, 02:45 AM IST
ಹೂವಿನಹಡಗಲಿ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಯ ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಟಿ.ಭರತ್‌ ಮಾತನಾಡಿದರು.  | Kannada Prabha

ಸಾರಾಂಶ

ಯೋಜನೆ ಆರಂಭದಿಂದ 2026ನೇ ಸಾಲಿನ ಮಾರ್ಚ್‌, ಏಪ್ರಿಲ್‌ ತಿಂಗಳು ಹೊರತುಪಡಿಸಿ, ಈ ವರೆಗೂ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ₹270 ಕೋಟಿ ಪಾವತಿಯಾಗಿದೆ.

ಹೂವಿನಹಡಗಲಿ: 1054 ಮೃತ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಜಮೆ ಆಗಿದ್ದು, ಅವುಗಳನ್ನು ಪತ್ತೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಿಡಿಪಿಒ ರಾಮನಗೌಡ ಹೇಳಿದರು.

ಇಲ್ಲಿನ ತಾಪಂ ರಾಜೀವ್‌ ಗಾಂಧಿ ಸಭಾಂಗಣದಲ್ಲಿ ಜರುಗಿದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಯೋಜನೆ ಆರಂಭದಿಂದ 2026ನೇ ಸಾಲಿನ ಮಾರ್ಚ್‌, ಏಪ್ರಿಲ್‌ ತಿಂಗಳು ಹೊರತುಪಡಿಸಿ, ಈ ವರೆಗೂ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ₹270 ಕೋಟಿ ಪಾವತಿಯಾಗಿದೆ. 1054 ಮೃತ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ ಆಗಿದೆ. ಅದರಲ್ಲಿ ಈ ವರೆಗೂ 710 ಜನರನ್ನು ಪತ್ತೆ ಮಾಡಲಾಗಿದೆ. ಉಳಿದಂತೆ 344 ಮೃತ ಮಹಿಳೆಯರ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಮಾಹಿತಿ ಸಂಗ್ರಹಿಸುತ್ತೇವೆಂದು ಸಭೆಗೆ ಮಾಹಿತಿ ನೀಡಿದರು.

ಆಹಾರ ನಾಗರಿಕ ಸರಬರಾಜು ಇಲಾಖೆ ಮತ್ತು ಸಿಡಿಪಿಒ ಇಲಾಖೆ ಜಂಟಿಯಾಗಿ ಸರ್ವೇ ಮಾಡಿ, ವಾರದೊಳಗೆ ಮಾಹಿತಿ ಸಂಗ್ರಹಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ, ತಾಲೂಕು ಅಧ್ಯಕ್ಷ ಪಿ.ಟಿ. ಭರತ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿ ನ್ಯಾಯ ಬೆಲೆ ಅಂಗಡಿಗಳ ಮುಂದೆ ಗ್ಯಾರಂಟಿ ಯೋಜನೆಯಡಿ ಅಕ್ಕಿ, ರಾಗಿ ಸೇರಿದಂತೆ ಕಾರ್ಡ್‌ ಒಂದಕ್ಕೆ ವಿತರಿಸುವ ಪಡಿತರ ಆಹಾರ ಧಾನ್ಯಗಳ ಪ್ರಮಾಣ ಕುರಿತು ನಾಮಫಲಕ ಹಾಕಬೇಕು. ಮೃತ ವ್ಯಕ್ತಿಗಳ ಮಾಹಿತಿಯನ್ನು ಆಯಾ ನ್ಯಾಯ ಬೆಲೆ ಅಂಗಡಿಗಳಿಂದ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನಲ್ಲಿ ಈವರೆಗೂ 1205 ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಮಾಡಿದ್ದು, ₹8.89 ಲಕ್ಷ ದಂಡ ವಸೂಲಿ ಮಾಡಲಾಗಿದೆ. 53176 ಬಿಪಿಎಲ್‌ ಕಾರ್ಡ್‌ಗಳಿವೆ. ಅವರಿಗೆ ಪ್ರತಿ ತಿಂಗಳ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ ನಿರೀಕ್ಷಕ ನಾಗೇಂದ್ರ ನಾಯ್ಕ ಮಾಹಿತಿ ನೀಡಿದರು.

ಪಂಚ ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆಯಂತೆ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶೂನ್ಯ ಚೀಟಿ ನೀಡುವ ರೀತಿಯಲ್ಲಿಯೇ ವಿದ್ಯುತ್‌ ಬಳಕೆ ಮಾಡುವ ಪ್ರತಿ ಮನೆಯ ಮಾಲೀಕರಿಗೆ ಉಚಿತ ವಿದ್ಯುತ್‌ ಚೀಟಿ ನೀಡಬೇಕು. ಪಂಚ ಗ್ಯಾರಂಟಿ ಯೋಜನೆಗಳ ಅರಿವು ಮಾಹಿತಿ ನೀಡುವ ಅಗತ್ಯವಿದೆ ಎಂದು ಅಧ್ಯಕ್ಷ ಪಿ.ಟಿ. ಭರತ್ ಹಾಗೂ ಸದಸ್ಯರು ಜೆಸ್ಕಾಂ ಎಇಇಗೆ ಸೂಚಿಸಿದರು.

ರೈತರಿಗೆ ವಿದ್ಯುತ್‌ ಪರಿವರ್ತಕಗಳನ್ನು ಸಕಾಲದಲ್ಲಿ ನೀಡಬೇಕು. ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ, ಇದಕ್ಕೆ ಆಸ್ಪದ ನೀಡಬಾರದು. ಹಗಲು ಹೊತ್ತು ಹಳ್ಳಿಗಳಲ್ಲಿ ಬೀದಿದೀಪಗಳು ಉರಿಯುತ್ತವೆ. ಈ ಕುರಿತು ಆಯಾ ಪಿಡಿಒಗಳು ಹಾಗೂ ಜೆಸ್ಕಾಂ ಕ್ರಮ ವಹಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ರೈತರ ಜಮೀನುಗಳಲ್ಲಿ ವಿದ್ಯುತ್‌ ಕಂಬಗಳು ಮಳೆ ಗಾಳಿಗೆ ಬಾಗಿವೆ. ಅವು ಮುರಿದು ಬಿದ್ದ ಬಳಿಕ ದುರಸ್ತಿಗೆ ಬರುತ್ತಾರೆ. ಆರಂಭದಲ್ಲೇ ಹೇಳಿದ್ದರೂ ಸ್ಥಳಕ್ಕೆ ಬಂದು ಕೆಲಸ ಮಾಡುತ್ತಿಲ್ಲ. ಕೇಳಿದರೆ ಕ್ರಿಯಾ ಯೋಜನೆ ಮಾಡಬೇಕೆಂದು ಹೇಳುತ್ತಾರೆ. ಆದರೆ ಮಳೆ-ಗಾಳಿಗೆ ಬಿದ್ದ ಕಂಬ ತೆರವಿಗೆ ಯಾವ ಕ್ರಿಯಾ ಯೋಜನೆ ಇಲ್ಲದೇ ಕೆಲಸ ಮಾಡುತ್ತಾರೆ. ರೈತರಿಗೆ ಸಮರ್ಪಕ ರೀತಿಯಲ್ಲಿ ವಿದ್ಯುತ್‌ ನೀಡಲು ಜೆಸ್ಕಾಂ ಎಇಇ ಕ್ರಮ ವಹಿಸಬೇಕು ಎಂದು ಸದಸ್ಯ ಎಂ.ಗುಡ್ಡದಯ್ಯ ಒತ್ತಾಯಿಸಿದರು.

ಪ್ರತಿ ಪ್ರಗತಿ ಪರಿಶೀಲನಾ ಸಭೆಗೂ ಸಾರಿಗೆ ವ್ಯವಸ್ಥಾಪಕರು ಬರುತ್ತಿಲ್ಲ. ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಕ್ರಮ ಯಾರು ಕೈಗೊಳ್ಳಬೇಕು? ಮುಂದಿನ ಸಭೆಗೆ ಗೈರಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅಧ್ಯಕ್ಷರು ಹೇಳಿದರು.

ಸಭೆಯಲ್ಲಿ ತಾಪಂ ಇಒ ಜಿ.ಪರಮೇಶ್ವರ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಗುರುವಿನ ರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹೆ ಸಂಸ್ಥಾಪಕ ಡಾ.ಟಿ.ಎಂ.ಎ. ಪೈ 128ನೇ ಜನ್ಮದಿನೋತ್ಸವ
ತೀವ್ರ ಹಣಾಹಣಿ: ಕುಲ್ಲೆಟಿರ-ಚೆಪ್ಪುಡಿರ ಫೈನಲ್‌ ಪ್ರವೇಶ