ಹುಬ್ಬಳ್ಳಿ: ರಾಜ್ಯದ ಮಹಿಳೆಯರ ಸ್ವಾಭಿಮಾನ ಖರೀದಿಸುವುದಕ್ಕಾಗಿಯೇ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಹೆಸರಲ್ಲಿ ಮಹಿಳೆಯರಿಗೆ ₹2 ಸಾವಿರ ಹಣ ನೀಡುತ್ತಿದೆ. ರಾಜ್ಯ ಸರ್ಕಾರದ ಈ ನಿಲುವು ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಹಿಳೆಯರ ಮೇಲೆ ನಿತ್ಯ ಅತ್ಯಾಚಾರ, ಕೊಲೆ, ದೌರ್ಜನ್ಯ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಮಹಿಳೆಯರ ರಕ್ಷಣೆಗೆ ಮುಂದಾಗದೇ ಅತ್ಯಾಚಾರಿಗಳ, ಕೊಲೆಗಡುಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ನೇಹಾ ಹಿರೇಮಠರಿಂದ ಆರಂಭವಾದ ಕೊಲೆ ಇಂದಿಗೂ ನಿಂತಿಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ಇಂದಿನ ಸರ್ಕಾರ ನಿಲ್ಲಿಸಿದೆ ಎಂದು ಆರೋಪಿಸಿದರು.
ನಮ್ಮತನವನ್ನು ರಕ್ಷಣೆ ಮಾಡುವ ಕಾಲ ಈಗ ಬಂದಿದೆ. ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ಮಹಿಳಾ ವಿರೋಧಿ ನೀತಿಗಳ ಕುರಿತು ಜನತೆಗೆ ತಿಳಿಸುವ ಕಾರ್ಯ ಮಾಡಬೇಕಿದೆ. ಪ್ರತಿಯೊಬ್ಬ ಮಹಿಳೆಯು ಕಿತ್ತೂರು ರಾಣಿ ಚೆನ್ನಮ್ಮ, ದುರ್ಗಾಮಾತೆಯಂತೆ ಹೋರಾಡಿ ರಾಜ್ಯವನ್ನು ರಕ್ಷಣೆ ಮಾಡುವಂತೆ ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಮಹಿಳೆಯರು ಹೋರಾಟದ ಸ್ವಾಭಿಮಾನ ಬೆಳೆಸಿಕೊಳ್ಳಿ. ಜನರ ಮಧ್ಯವಿದ್ದು, ಅವರ ಸಮಸ್ಯೆಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವವರು, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವವರು ನಾಯಕನಾಗುತ್ತಾರೆ. ಜನಪ್ರತಿನಿಧಿಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಬೇಕು ಎಂಬ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಸಾಕಾರಗೊಳಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಹಿಳೆಯರಿಗೂ ಹೆಚ್ಚಿನ ಅವಕಾಶಗಳಿದ್ದು, ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಕ್ರಿಯಾಶೀಲ, ಪ್ರಾಮಾಣಿಕರಾಗಿ ಪಕ್ಷ ನೀಡಿದ ಕಾರ್ಯಗಳನ್ನು ಶ್ರಮವಹಿಸಿ ಪೂರ್ಣಗೊಳಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ನಿಮಗೂ ಸ್ಥಾನಮಾನಗಳು ದೊರೆಯಲಿವೆ. ಮಹಿಳಾ ಕಾರ್ಯಕರ್ತೆಯರು ಇಂದಿನಿಂದಲೇ ಪಕ್ಷ ಸಂಘಟನೆಯಲ್ಲಿ ಮುಂದಾಗುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಸರ್ಕಾರ ಇಂದು ಕಾನೂನನ್ನು ದೇಶವಿರೋಧಿಗಳಿಗೆ ಅಡವಿಟ್ಟಿದೆ. ಧರ್ಮಸ್ಥಳ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ನೀಡಿದ ಆಸಕ್ತಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ, ಎಸ್‌ಐಟಿ ರಚನೆಗೆ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ. ರಾಜ್ಯದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಆಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಸೀಮಾ ಮಸೂತಿ, ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದ್ವಾ, ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡ್ರ, ಶಿಲ್ಪಾ ಸುವರ್ಣಾ, ರಾಜಶ್ರೀ ಸಾಲಗಟ್ಟಿ, ರೇಖಾ ಹೆಗಡೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಂದ ಮಹಿಳಾ ಕಾರ್ಯಕರ್ತರೆ ಪಾಲ್ಗೊಂಡಿದ್ದರು.