ಕೊಪ್ಪಳ:
ಗೃಹಲಕ್ಷ್ಮೀ ಯೋಜನೆಯ ತಾಂತ್ರಿಕ ಸಮಸ್ಯೆ ತಕ್ಷಣ ಇತ್ಯರ್ಥ ಮಾಡಬೇಕು ಎಂದು ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಬಾಲಚಂದ್ರನ್ ತಾಕೀತು ಮಾಡಿದರು.ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ತಾಲೂಕು ಮಟ್ಟದ ಅನುಷ್ಠಾನ ಸಮಿತಿಯಿಂದ ಮುನಿರಾಬಾದ್‌ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಲಕ್ಷ್ಮೀ ಯೋಜನೆಯ ಕುರಿತು ಸಭೆಯಲ್ಲಿ ಫಲಾನುಭವಿಗಳಿಗೆ ಹಣ ಜಮೆಯಾಗದೆ ಇದ್ದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ತಾಂತ್ರಿಕ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಸಂಗ್ರಹಣೆ, ವಿತರಣೆ ಮತ್ತು ಆಹಾರ ಧಾನ್ಯ ಉಳಿದಿರುವ ಮಾಹಿತಿಯುಳ್ಳ ನಾಮಫಲಕ ಅಳವಡಿಸಲ್ಲ ಎಂದು ಸದಸ್ಯರು ಸಭೆಯಲ್ಲಿ ತಿಳಿಸಿದರು. ಆಗ ಅಧ್ಯಕ್ಷರು ಕೂಡಲೇ ಅಳವಡಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಏಪ್ರಿಲ್ ತಿಂಗಳಲ್ಲಿ ತಾಲೂಕು ಪಂಚಾಯಿತಿಯಲ್ಲಿ ಜರುಗಿದ ನ್ಯಾಯಬೆಲೆ ಅಂಗಡಿಗಳ ಸನದುದಾರರ ಸಭೆಗೆ ಹಾಜರಾಗದ ಸನದುದಾರರಿಗೆ ಆಹಾರ ಇಲಾಖೆಯಿಂದ ನೋಟಿಸ್ ನೀಡುವಂತೆ ಸಭೆಯಲ್ಲಿ ಸದಸ್ಯರು ತಿಳಿಸಿದರು. ಪಂಚ ಗ್ಯಾರಂಟಿ ಯೋಜನೆಗಳು ಪ್ರತಿ ಫಲಾನುಭವಿಗೆ ತಲುಪುವಂತೆ ಹಾಜರಿದ್ದ ಸದಸ್ಯರು, ಅನುಷ್ಠಾನ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.ಯುವನಿಧಿ ಫಲಾನುಭವಿಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡುವುದು ಕಡ್ಡಾಯವಾಗಿತ್ತು. ಸ್ವಲ್ಪ ಬದಲಾವಣೆ ಮಾಡಿ ಪ್ರತಿ 3 ತಿಂಗಳಿಗೊಮ್ಮೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ತಾಪಂ ಇಒ ದುಂಡಪ್ಪ ತುರಾದಿ, ತಹಸೀಲ್ದಾರ್ ವಿಠ್ಠಲ್ ಚೌಗಲಾ, ಮುನಿರಾಬಾದ ಡ್ಯಾಂ ಗ್ರಾಪಂ ಅಧ್ಯಕ್ಷ ಆಯೂಬ್ ಖಾನ್, ಉಪಾಧ್ಯಕ್ಷೆ ಸೌಭಾಗ್ಯ ನಾಗರಾಜ, ಸಮಿತಿ ಸದಸ್ಯ ದೇವರಾಜ ನಡುವಿನಮನಿ, ರಮೇಶ ಹ್ಯಾಟಿ, ಜ್ಯೋತಿ ಗೊಂಡಬಾಳ, ಸವಿತಾ ಗೊರಂಟ್ಲಿ, ಅನ್ನದಾನಸ್ವಾಮಿ, ಮೆಹಬೂಬಪಾಷಾ ಮಾನ್ವಿ, ಅನ್ವರ್ ಹುಸೇನ್ ಗಡಾದ, ಪರಶುರಾಮ ಕೊರವರ, ಧರ್ಮರಾಜರಾವ್, ಲಕ್ಷ್ಮಣ ಡೊಳ್ಳಿನ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧಿಕಾರಿಗಳು, ಮುನಿರಾಬಾದ್ ಡ್ಯಾಂ ಗ್ರಾಪಂ ಪಿಡಿಒ ಮಹೇಶ್ ಸಜ್ಜನ, ತಾಪಂ ಸಿಬ್ಬಂದಿಗಳು ಹಾಜರಿದ್ದರು.