ಎಳನೀರು- ದಿಡುಪೆ ರಸ್ತೆ ಅಭಿವೃದ್ಧಿಗೆ ಸಿಎಂಗೆ ಸಚಿವ ಗುಂಡೂರಾವ್‌ ಮನವಿ

KannadaprabhaNewsNetwork | Published : May 17, 2025 2:42 AM
ಬೆಳ್ತಂಗಡಿ- ದಿಡುಪೆ- ಎಳನೀರು- ಸಂಸೆ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅಗತ್ಯವಿರುವ ಸರ್ವೇ ಕಾರ್ಯ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
Follow Us

ಕನ್ನಡಪ್ರಭ ವಾರ್ತೆ ಮಂಗಳೂರು

ಬೆಳ್ತಂಗಡಿ- ದಿಡುಪೆ- ಎಳನೀರು- ಸಂಸೆ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅಗತ್ಯವಿರುವ ಸರ್ವೇ ಕಾರ್ಯ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ ವ್ಯಾಪ್ತಿಗೊಳಪಟ್ಟ ಎಳನೀರು, ಗುತ್ಯಡ್ಕ, ಬಂಗಾರಗಿ, ಉಕ್ಕುಡ ಮತ್ತು ಕುರ್ಚಾರು ಪ್ರದೇಶಗಳು ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ನೂರಾರು ಕುಟುಂಬಗಳು ತಮ್ಮ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಬೇಕಾದರೆ ಕುದುರೆಮುಖ- ಬಜಗೋಳಿ- ಬೆಳ್ತಂಗಡಿ ಮೂಲಕ ಸುಮಾರು 120 ಕಿ.ಮೀ. ದೂರವನ್ನು ಕ್ರಮಿಸಬೇಕು. ಆದರೆ, ಎಳನೀರು- ದಿಡುಪೆ ರಸ್ತೆ ಅಭಿವೃದ್ಧಿಯಾದರೆ ಈ ಪ್ರದೇಶಗಳಲ್ಲಿನ ಜನರಿಗೆ ತಮ್ಮ ಗ್ರಾಮ ಪಂಚಾಯ್ತಿ ತಲುಪಲು ಕೇವಲ 9 ಕಿ.ಮೀ. ಹಾಗೂ ತಾಲೂಕು ಕೇಂದ್ರಕ್ಕೆ 20 ಕಿ.ಮೀ. ಕ್ರಮಿಸಿದರೆ ಸಾಕಾಗುತ್ತದೆ.

ಈ 9 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ಈ ಭಾಗದ ಜನರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ರಸ್ತೆ ಅಭಿವೃದ್ಧಿ ಮಾಡಬೇಕಾದರೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅನುಮತಿ ಅಗತ್ಯ. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ರಸ್ತೆಯ ಅಭಿವೃದ್ಧಿಗೆ ಸರ್ವೆ ನಡೆಸುವ ಬಗ್ಗೆ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗವು ಅನುಮತಿ ನೀಡಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದುವರೆಗೂ ರಸ್ತೆ ಅಭಿವೃದ್ಧಿಯ ಸರ್ವೇ ಕಾರ್ಯದಲ್ಲಿ ಪ್ರಗತಿ ಕಂಡುಬಂದಿಲ್ಲ.

ಮಳೆಗಾಲದಲ್ಲಿ ಚಾರ್ಮಾಡಿ ಮತ್ತು ಶಿರಾಡಿ ಎರಡೂ ಘಾಟ್ ರಸ್ತೆಗಳಲ್ಲಿ ಗುಡ್ಡ ಕುಸಿತದಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಈ ಸಂದರ್ಭಗಳಲ್ಲಿ ಕರಾವಳಿ ಮತ್ತು ಬೆಟ್ಟದ ಮೇಲಿನ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳು ಕಡಿತಗೊಂಡು ಕರಾವಳಿಯು ದ್ವೀಪವಾಗಿ ಪರಿವರ್ತನೆಗೊಳ್ಳುತ್ತದೆ. ಎಳನೀರು- ದಿಡುಪೆ ರಸ್ತೆಯನ್ನು ಸಂಸೆಯವರೆಗೆ ಅಭಿವೃದ್ಧಿಪಡಿಸಿದರೆ ಕರಾವಳಿ ಹಾಗೂ ಘಟ್ಟದ ಮೇಲಿನ ಪ್ರದೇಶಗಳನ್ನು ಸಂಪರ್ಕಿಸಲು ಇನ್ನೊಂದು ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ ಎಂದು ಸಚಿವರು ಸಿಎಂಗೆ ಮನವಿ ಸಲ್ಲಿಸಿದ್ದಾರೆ.