2007ರಲ್ಲಿ ಸ್ಥಗಿತಗೊಂಡಿದ್ದ ಸಂಸ್ಕರಣ ಘಟಕ ನಿರ್ಮಾಣದ ಭೂಮಿ ನೀಡಿದ ರೈತರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಅಲ್ಲಿಂದ ಇಲ್ಲಿಯವರೆಗೂ ಘಟಕ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮಲತ್ಯಾಜ್ಯ ಸಂಸ್ಕರಣ ಘಟಕವನ್ನು 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಶಾಸಕರು, ಪಟ್ಟಣದಲ್ಲಿ ಒಳಚರಂಡಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ ಎಂದರು.
ಪಟ್ಟಣದ ಬನ್ನಾರಿ ಮಾರಿಯಮ್ಮ ದೇವಸ್ಥಾನದ ಮುಂಭಾಗದ ಕೃಷಿ ಪ್ರದೇಶದಲ್ಲಿ ರೈತರಿಂದ ಸಂಸ್ಕರಣ ಘಟಕ ನಿರ್ಮಾಣಕ್ಕೆ 5 ಎಕರೆ 21 ಗುಂಟೆ ನೀಡಿ ಚಾಲನೆ ನೀಡಲಾಗಿದೆ ಎಂದರು.2007ರಲ್ಲಿ ಸ್ಥಗಿತಗೊಂಡಿದ್ದ ಸಂಸ್ಕರಣ ಘಟಕ ನಿರ್ಮಾಣದ ಭೂಮಿ ನೀಡಿದ ರೈತರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಅಲ್ಲಿಂದ ಇಲ್ಲಿಯವರೆಗೂ ಘಟಕ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರೂ ಸಹ ತಮ್ಮ ಅಧಿಕಾರದ ಅವಧಿಯಲ್ಲಿ ರೈತರ ಮನವೊಲಿಸಿ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಇದೀಗ ರೈತರಿಗೆ ಪರಿಹಾರ ನೀಡಿ ಘಟಕ ನಿರ್ಮಾಣ ಸೇರಿ ಹೊಸದಾಗಿ ನಿರ್ಮಿಸಿರುವ ಬೇಕಿರುವ ಪೈಪ್‌ಲೈನ್ ಕಾಮಗಾರಿ ಒಳಗೊಂಡಂತೆ 24 ಕೋಟಿ ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಸಿ.ಎಸ್.ಪುಟ್ಟರಾಜು ಅವರು ಶಾಸಕರಾಗಿದ್ದ 2007-08ರ ಅವಧಿಯಲ್ಲಿ ಒಳ್ಳೆಯ ಉದ್ದೇಶದಿಂದ ಸಂಸ್ಕರಣ ಘಟಕ ನಿರ್ಮಾಣ ಮಾಡಲು ಮುಂದಾಗಿದ್ದರು. 2013ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರು ಶಾಸಕರಾದ ಬಳಿಕ ರೈತರಿಗೆ 10 ಲಕ್ಷ ಪರಿಹಾರ ಮಂಜೂರು ಮಾಡಿಸಿದರೂ ಹಣ ಬಿಡುಗಡೆ ಸಾಧ್ಯವಾಗಲಿಲ್ಲ ಎಂದರು.
2018ರಲ್ಲಿ ಸಿ.ಎಸ್.ಪುಟ್ಟರಾಜು ಅವರು ಶಾಸಕರಾಗಿ, ಸಚಿವರಾದ ಬಳಿಕ ರೈತರಿಗೆ ಮಂಜೂರಾಗಿದ್ದ ಗುಂಟೆಗೆ 10 ಲಕ್ಷ ಪರಿಹಾರದ ಹಣ ಮಂಜೂರು ಮಾಡಿಸಿಕೊಟ್ಟರು. ಇದೀಗ ಘಟಕ ನಿರ್ಮಾಣಕ್ಕೆ ಈಗಿನ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅವರು 20 ಕೋಟಿ ಅನುದಾನ ಮಂಜೂರು ಮಾಡಿಸಿ ಘಟಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದರು.ಈ ಯೋಜನೆ ಮಂಜೂರಾಗುವುದರಲ್ಲಿ ಮೂವರ ಕೊಡುಗೆ ಅಪಾರವಿದೆ. ಘಟಕ ನಿರ್ಮಾಣಕ್ಕೆ ನಮ್ಮ ಕುಟುಂಬವೂ ಸಹ ಭೂಮಿ ನೀಡಿದೆ. ನಮ್ಮ ಕುಟುಂಬಕ್ಕೆ ಹೊರತುಪಡಿಸಿ ಭೂಮಿ ನೀಡಿರುವ ಎಲ್ಲಾ ರೈತ ಕುಟುಂಬಕ್ಕೆ ಒಂದು ನೌಕರಿ ಕೊಡಿಸಬೇಕೆಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅವರಿಗೆ ಮನವಿ ಮಾಡಿದರು.
ಈ ವೇಳೆ ತಹಸೀಲ್ದಾರ್ ಬಸವರೆಡ್ಡಪ್ಪರೋಣದ, ಪುರಸಭೆ ಮುಖ್ಯಾಧಿಕಾರಿ ಸತೀಶ್, ನಾಮಿನಿ ಸದಸ್ಯರಾದ ಸೋಮಶೇಖರ್, ರಮೇಶ್, ಎಂ.ಮುರುಳಿಧರ್, ಮಹಮದ್ ಹನೀಫ್, ಲಕ್ಷ್ಮೇಗೌಡ, ಪುರಸಭೆ ಮಾಜಿ ಅಧ್ಯಕ್ಷರಾದ ಡಿ.ಶ್ರೀನಿವಾಸ್, ಎಂ.ಗಿರೀಶ, ಜ್ಯೋತಿಬಾಬು, ಅರ್ಚನಚಂದ್ರು, ಹಾರೋಹಳ್ಳಿ ಸತೀಶ್, ಮಾಜಿ ಸದಸ್ಯರಾದ ಚಂದ್ರು, ಶಿವಕುಮಾರ್, ಪಾರ್ಥ, ಉಮಾಶಂಕರ್, ಜಯಲಕ್ಷ್ಮೀ, ಮಂಗಳ ಸೇರಿದಂತೆ ಮುಖಂಡರು ಹಾಜರಿದ್ದರು.