ಹೊಸಪೇಟೆ: ಹರಪನಹಳ್ಳಿ ತಾಲೂಕಿನಲ್ಲಿ ಫಸಲ್ ಬಿಮಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ರಾಜ್ಯ ರೈತ ಸಂಘವು ಆರೋಪಿಸಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ತಾಲೂಕಿನ ಹಾರಕನಾಳ್ ಗ್ರಾಪಂ ವ್ಯಾಪ್ತಿಯ ನಡೆದ ಬಿಮಾ ಫಸಲ್ ಯೋಜನೆ ಅಡಿ ನಡೆದಿರುವ ಅಕ್ರಮಗಳ ಬಗ್ಗೆ ಕಮಿಷನರ್ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿ ಮುತುವರ್ಜಿ ವಹಿಸದೇ ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿ ಮಾಡಿ ಕಳಿಸಿದ್ದೀರಿ, ಆದರೆ ಸ್ಥಳೀಯ ತಾಸಿಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ನಿರ್ವಹಿಸಿಲ್ಲ.
ಉದ್ದೇಶಪೂರ್ವಕವಾಗಿ ನೀರಾವರಿ ಜಮೀನಿನ ಸಿಸಿ ಕಟಿಂಗ್ ನ್ನು ಬಯಲುಸೀಮೆ ಭೂಮಿಗೆ ಸೇರಿಸಿದ್ದಾರೆ. ಇನ್ಸುರೆನ್ಸ್ ಕಂಪನಿ ಒಟಿಪಿ ಬಂದರೆ ಮಾತ್ರ ಸಿಸಿ ಕಟ್ಟಿಂಗ್ ಮಾಡಬೇಕು. ಆದರೆ ಓಟಿಪಿ ಬಾರದಿದ್ದರೂ ಸಿಸಿ ಕಟಿಂಗ್ ಮಾಡಿದ್ದಾರೆ. ಮುಂಗಾರು ಬೆಳೆಯಲ್ಲಿ ಶೇ.75 ನೀರಾವರಿಗೆ 127 ಬಯಲುಸೀಮೆ ಭೂಮಿಗೆ ಸಿಸಿ ಕಟ್ಟಿಂಗ್ ತೋರಿಸಿರುತ್ತಾರೆ. ಇದು ಅವೈಜ್ಞಾನಿಕ ಎಂದರು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ನ್ಯಾಯ ಒದಗಿಸಬೇಕು. ಇಲ್ಲವಾದರೆ ರೈತರು ಬೀದಿಗಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಿಜಯನಗರ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ್ ತಂಬ್ರಹಳ್ಳಿ, ರೈತ ಮುಖಂಡರಾದ ಹಾಲೇಶ್ ನಾಯಕ್, ಬಸವರಾಜಯ್ಯ, ಹರೀಶ್, ಲೋಕೇಶ್ ನಾಯಕ ಮನವಿಯಲ್ಲಿ ಒತ್ತಾಯಿಸಿದ್ದಾರೆ.