ಪಾತಾಳಕ್ಕಿಳಿದ ಅಂತರ್ಜಲ, ಬೆಳೆ ರಕ್ಷಣೆಗೆ ಸಾಹಸ!

KannadaprabhaNewsNetwork |  
Published : Nov 02, 2026, 03:45 AM IST
ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಹೊಲದಲ್ಲಿ ಬೋರ್‌ವೆಲ್‌ ಮೂಲಕ ಬೆಳೆಗಳಿಗೆ ನೀರು ಪೂರೈಸುತ್ತಿರುವುದು. | Kannada Prabha

ಸಾರಾಂಶ

ಮುಂಗಾರು ಮಳೆಯ ಕೊರತೆ, ಮರುಪೂರಣವಾಗದ ಅಂತರ್ಜಲ ಹಾಗೂ ಹೆಚ್ಚುತ್ತಿರುವ ನೀರಿನ ಬೇಡಿಕೆ ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಿವೆ.

ಈರಪ್ಪ ನಾಯ್ಕರ್

ಹುಬ್ಬಳ್ಳಿ: ಮಳೆ ಕೈಕೊಟ್ಟ ಬೆನ್ನಲ್ಲೇ ಅಂತರ್ಜಲವೂ ರೈತರ ಕೈಬಿಡುತ್ತಿದೆ. ಕೆರೆ, ಬಾವಿ, ಹಳ್ಳಗಳೆಲ್ಲ ಬರಿದಾಗುತ್ತಿರುವ ನಡುವೆ ಕೃಷಿಗೆ ಆಸರೆಯಾಗಿದ್ದ ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗಿದ್ದು, ಧಾರವಾಡ ಜಿಲ್ಲೆಯ ರೈತರು ಬೆಳೆ ಉಳಿಸಿಕೊಳ್ಳುವುದಕ್ಕೂ, ಕುಡಿಯುವ ನೀರು ಹೊಂದಿಸಿಕೊಳ್ಳುವುದಕ್ಕೂ ಪರದಾಡುವ ಸ್ಥಿತಿ ಎದುರಾಗಲಿದೆ ಎಂಬ ಆತಂಕ ಮನೆ ಮಾಡಿದೆ.

ಮುಂಗಾರು ಮಳೆಯ ಕೊರತೆ, ಮರುಪೂರಣವಾಗದ ಅಂತರ್ಜಲ ಹಾಗೂ ಹೆಚ್ಚುತ್ತಿರುವ ನೀರಿನ ಬೇಡಿಕೆ ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಿವೆ. ಕೃಷಿ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಾದ್ಯಂತ ಜೂನ್‌ 1ರಿಂದ ಸೆಪ್ಟೆಂಬರ್‌ 30ರ ವರೆಗೆ ವಾಡಿಕೆಯ 513.9 ಮಿ.ಮೀ. ಮಳೆಯ ಬದಲಿಗೆ ಕೇವಲ 267.8 ಮಿ.ಮೀ. ಮಳೆಯಾಗಿದೆ. ಶೇ. 48ರಷ್ಟು ಮಳೆ ಕೊರತೆಯಿಂದ ಕೃಷಿಭೂಮಿಯಲ್ಲಿ ತೇವಾಂಶ ಕಡಿಮೆಯಾಗಿದ್ದು, ಬೆಳೆಗಳ ಬೆಳವಣಿಗೆಗೂ ಅಡ್ಡಿಯಾಗಿದೆ.

ಸಾಲದ ಹೊರೆ, ಒಣಗುವ ಬೆಳೆ: ಕೊಳವೆಬಾವಿ ಕೊರೆಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ದಿನಕ್ಕೆ ಒಂದೆರಡು ಗಂಟೆ ಹರಿಯುವ ನೀರನ್ನು ಬೆಳೆಗೆ ಬಳಸಬೇಕೋ, ಕುಟುಂಬದ ಕುಡಿಯುವ ಅಗತ್ಯಕ್ಕೆ ಉಳಿಸಿಕೊಳ್ಳಬೇಕೋ ಎಂಬ ಗೊಂದಲ ರೈತರನ್ನು ಕಾಡುತ್ತಿದೆ. ಕೈಗಡ, ಬ್ಯಾಂಕ್‌ ಸಾಲ ಮಾಡಿ ಬಿತ್ತನೆ ಮಾಡಿದವರು ಬೆಳೆ ಒಣಗುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ.

ಕಲಘಟಗಿ ತಾಲೂಕಿನ ರೈತ ಲವ ಜಾಧವ ಅವರ ಪ್ರಕಾರ, ಸುತ್ತಮುತ್ತಲಿನ ಕೆರೆ-ಕಟ್ಟೆಗಳು ಬತ್ತುತ್ತಿದ್ದು, ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣವೂ ಇಳಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಪರದಾಡಬೇಕಾಗಬಹುದು ಎಂಬ ಆತಂಕವಿದೆ.

ಗುಡೇನಕಟ್ಟಿ, ಎರಿನಾರಾಯಣಪುರ, ಮುಳ್ಳಳ್ಳಿ, ಬೆನಕನಹಳ್ಳಿ, ಹಿರೇನರ್ತಿ, ಯರಗುಪ್ಪಿ, ರೊಟ್ಟಿಗವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೊಳವೆಬಾವಿಗಳಿಂದ ಕೃಷಿ ಹಾಗೂ ದನಕರುಗಳ ಬಳಕೆಗೆ ಯೋಗ್ಯವಲ್ಲದ ನೀರು ದೊರೆಯುತ್ತಿದೆ ಎಂದು ರೈತ ಬಸವರಾಜ ಯೋಗಪ್ಪನವರ ಆತಂಕ ವ್ಯಕ್ತಪಡಿಸುತ್ತಾರೆ.

ಕಡಿಮೆ ನೀರಿನ ಬೆಳೆಗಳತ್ತ ಚಿತ್ತ: ನೀರಿನ ಅಭಾವದಿಂದ ರೈತರು ಹೆಚ್ಚು ನೀರು ಬೇಡುವ ಬೆಳೆಗಳಿಂದ ದೂರ ಸರಿದು, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಸಿರಿಧಾನ್ಯ, ದ್ವಿದಳ ಧಾನ್ಯ, ಕಡಲೆ ಹಾಗೂ ಜೋಳದತ್ತ ಮುಖ ಮಾಡುತ್ತಿದ್ದಾರೆ. ಆದರೂ ಈಗಾಗಲೇ ಬಿತ್ತಿದ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿವೆ. ಬೆಳೆ ವಿಮೆ ಹಾಗೂ ಸೂಕ್ತ ಪರಿಹಾರ ಒದಗಿಸುವ ಮೂಲಕ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.ಏಳು ತಾಲೂಕುಗಳಲ್ಲಿ ಅಂತರ್ಜಲ ಕುಸಿತ

ಧಾರವಾಡ ಜಿಲ್ಲೆಯ ಎಂಟು ತಾಲೂಕುಗಳ ಪೈಕಿ ಏಳರಲ್ಲಿ 2021-2025ರ ಸರಾಸರಿಗೆ ಹೋಲಿಸಿದರೆ ಅಂತರ್ಜಲದ ಆಳ ಹೆಚ್ಚಳವಾಗಿದೆ. ಕಲಘಟಗಿಯಲ್ಲಿ 2.75 ಮೀಟರ್‌, ಹುಬ್ಬಳ್ಳಿಯಲ್ಲಿ 1.16 ಮೀಟರ್‌ ಹಾಗೂ ಧಾರವಾಡದಲ್ಲಿ 1.12 ಮೀಟರ್‌ ಆಳ ಹೆಚ್ಚಳ ದಾಖಲಾಗಿದೆ. ಅಣ್ಣಿಗೇರಿ, ಕುಂದಗೋಳ, ಅಳ್ನಾವರ ಹಾಗೂ ಹುಬ್ಬಳ್ಳಿ ನಗರದಲ್ಲೂ ಅಂತರ್ಜಲದ ಆಳ ಹೆಚ್ಚಿದೆ. ನವಲಗುಂದದಲ್ಲಿ ಮಾತ್ರ 1.58 ಮೀಟರ್‌ ಆಳ ಕಡಿಮೆಯಾಗಿದೆ ಎಂದು ಧಾರವಾಡ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಮಲ್ಲಿಕಾರ್ಜುನ ಬಳಿಗಾರ "ಕನ್ನಡಪ್ರಭ "ಕ್ಕೆ ತಿಳಿಸಿದ್ದಾರೆ.ತೀವ್ರ ಬರಗಾಲದಿಂದ ಒಂಬತ್ತು ಎಕರೆ ಜಮೀನಿನಲ್ಲಿ ಎರಡು ಇಂಚಿನಷ್ಟು ನೀರು ಸಿಗುತ್ತಿದೆ. ಇದು ಕೃಷಿಗೆ ಸಾಕಾಗುತ್ತಿಲ್ಲ. ಕರಿನೆಲದಲ್ಲಿ ಬಿರುಕು ಕಾಣಿಸಿಕೊಂಡಿದೆ. ಹಿಂಗಾರು ಬೆಳೆ ಕೈಗೆ ಬರುವುದೂ ಅನುಮಾನವಾಗಿದೆ ಎಂದು ಕುಂದಗೋಳದ ರೈತ ಶಿವರಾಜ ಯಲ್ಲಪ್ಪ ಬೆಳ್ಳಟ್ಟಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರ ಮಕ್ಕಳಿಗೆ ಹಳ್ಳಿ ಜೀವನ ಪರಿಚಯಿಸುವ ‘ಗ್ರಾಮಾನುಭವ’ಕ್ಕೆ ಚಾಲನೆ
ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ: ರಿಝ್ವಾನ್ ಅರ್ಷದ್