ಡಂಬಳ: ಮಣ್ಣು, ನೀರು, ಗಾಳಿ, ಅಗ್ನಿ, ಆಕಾಶ ಮನುಷ್ಯನ ಆಸ್ತಿಗಳಾಗಿದ್ದು, ಇವುಗಳಿಗೆ ಎಲ್ಲಿಯವರೆಗೆ ತೊಂದರೆ ಆಗುವುದಿಲ್ಲವೋ ಅಲ್ಲಿಯವರೆಗೆ ದೇಶ ಸುರಕ್ಷಿತವಾಗಿರುತ್ತದೆ. ಆದರೆ ಇವು ಇಂದು ಸುರಕ್ಷಿತವಾಗಿಲ್ಲ. ಆದರಿಂದ ಗಿಡಮರಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕೊಲ್ಲಾಪುರದ ಕನೇರಿವಾಡಿ ಸಿದ್ಧಗಿರಿ ಮಹಾಸಂಸ್ಥಾನಮಠದ ಜಗದ್ಗುರು ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಕಪ್ಪತ್ತಗುಡ್ಡದ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿ ಮಾತನಾಡಿ, ದಿನೇ ದಿನೇ ವಾತಾವರಣ ಉಷ್ಣವಾಗುತ್ತಿದೆ. 15 ಜಿಲ್ಲೆಗಳಿಗೆ ಶುದ್ಧ ಹವೆ ನೀಡುವ ಕೇಂದ್ರವಾಗಿರುವ ಕಪ್ಪತ್ತಗುಡ್ಡವನ್ನು ಉಳಿಸಿ ಬೆಳೆಸಿದಾಗ ಬೆಳೆಗಳಿಗೆ ರೋಗ-ರುಜಿನ ಬರುವುದಿಲ್ಲ. ಜತೆಗೆ ಮಳೆಯ ಜತೆಗೆ ಉತ್ತಮ ಬೆಳೆ ಹೊಂದಲು ಸಾಧ್ಯ. ಈ ಹಿನ್ನೆಲೆ ಪ್ರತಿಯೊಬ್ಬರೂ ಸಮರೋಪಾದಿಯಲ್ಲಿ ಗಿಡಗಳನ್ನು ಬೆಳೆಸಲು ಮುಂದಾಗಬೇಕು ಎಂದರು.
ಸ್ವೀಕರಿಸಲಾದ ಗೊತ್ತುವಳಿಗಳು: ಒಂದು ಸಾವಿರ ರೈತರು ಒಂದು ಎಕರೆ ಭೂಮಿಯಲ್ಲಿ ನಂದಿ ಹಾಗೂ ಗೋ ಆಧಾರಿತ ಪಾರಂಪರಿಕ ಸಾವಯವ ಕೃಷಿಯಲ್ಲಿ ತೊಡಗುವುದು.ದೇಶಿ ಬೀಜಗಳ ಸಂಶೋಧನೆ ಸಂವರ್ಧನೆ ಸಂರಕ್ಷಣೆಗೆ ಆದ್ಯತೆ, ಅಡವಿ ಸಸ್ಯಗಳ ಸಂವರ್ದನೆ ಜತೆಗೆ ಸಂಶೋಧನೆಗೆ ಆದ್ಯತೆ, ನೈಸರ್ಗಿಕ ಎರೆಹುಳು ಅಭಿವೃದ್ಧಿ, ಕಪ್ಪತ್ತಗುಡ್ಡದ 80 ಸಾವಿರ ಎಕರೆ ಕಾಡುಪ್ರದೇಶ ಸಂರಕ್ಷಿಸಿಕೊಳ್ಳಲು ಯಾವುದೇ ಗಣಿಗಾರಿಕೆಗೆ ಆಸ್ಪದ ನೀಡದಂತೆ ಜನಜಾಗೃತಿಗೊಳಿಸುವುದು ಮತ್ತು ಗಣಿಗಾರಿಕೆಗೆ ಅನುಮತಿ ನೀಡದಂತೆ ಸರ್ಕಾರವನ್ನು ಆಗ್ರಹಿಸುವುದು.
ಕೊಡಗು ವಿಶ್ವ ವಿದ್ಯಾಲಯ ಕುಲಪತಿ ಡಾ. ಅಶೋಕ ಆಲೂರ, ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ್, ಗ್ರಾಮೀಣ ವಿಶ್ವ ವಿದ್ಯಾಲಯ ಕುಲಪತಿ ವಿಶ್ವನಾಥ ಚಟಪಲ್ಲಿ ಮಾತನಾಡಿದರು.
ಗುರುನಾಥಗೌಡ ಓದುಗೌಡರ, ಡಾ. ಎಂ.ಎಸ್. ಉಪ್ಪಿನ, ದೇವೇಂದ್ರಪ್ಪ ಬೂಲವಟಗಿ, ಬಿ.ಎಸ್. ಅಂಗಡಿ, ದೇವರಡ್ಡಿ ಅಗಸಿನಕೊಪ್ಪ, ದೇವಪ್ಪ ಅರಹುಣಸಿ, ಅಶೋಕ ಸಂಕಣ್ಣವರ, ಗೋವಿಂದಪ್ಪ ಗೌಡಪ್ಪಗೋಳ, ಮಂಗಲಾ ನೀಲಗುಂದ, ಗೌಸುಸಾಬ್ ತಾಂಬೋಟಿ ಇದ್ದರು. ಸಿ.ಎಸ್. ಅರಸನಾಳ ಕಾರ್ಯಕ್ರಮ ನಿರೂಪಿಸಿದರು.