ಉದ್ಯೋಗ ಮೇಳದಲ್ಲಿ ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಹುಲ್ಲುನಾಚೇಗೌಡ ಹೇಳಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆಕೃಷಿ ಕ್ಷೇತ್ರದಲ್ಲಿ ಅಧಿಕ ಉದ್ಯೋಗ ಸೃಷ್ಟಿ ಮಾಡಬಹುದಾಗಿದ್ದು, ಈ ಮೂಲಕ ರೈತರ ಬೆಳೆಗಳಿಗೆ ಮೌಲ್ಯವರ್ಧನೆ ಮೂಲಕ ಆರ್ಥಿಕ ಸ್ವಾವಲಂಬಿಯಾಗಿಸಲು ಒತ್ತು ನೀಡಿರುವುದಾಗಿ ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ, ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೇಗೌಡ ತಿಳಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಮೈಕ್ರೋಬಿ ಆಗ್ರೋಟೆಕ್ ಪ್ರೈವೇಟ್ ಲಿ. ಹಾಗೂ ಶ್ರೀ ಶಿವ ನಾರದಮುನಿ ಕೃಷಿ ಮಾಹಿತಿ ಮತ್ತು ಪರಿಕರ ಮಾರಾಟ ಕೇಂದ್ರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ತಮ್ಮ ಸಂಸ್ಥೆಯಿಂದ ಒಂದು ಸಾವಿರ ಗ್ರಾಮೀಣ ಯುವಕರಿಗೆ ಇನ್ನು 6 ತಿಂಗಳಲ್ಲಿ ಉದ್ಯೋಗ ನೀಡುವ ಗುರಿ ಹೊಂದಿದ್ದೇವೆ.ಕೃಷಿ ಕ್ಷೇತ್ರದಲ್ಲಿ ಅಧಿಕವಾಗಿ ಉದ್ಯೋಗಗಳ ಸೃಷ್ಟಿ ಮಾಡಬಹುದು. ರೈತರನ್ನು ತಾಂತ್ರಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದಾಗ ಮಾತ್ರ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಹಾಗೂ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಯುವಕರನ್ನು ಕೃಷಿ ಉದ್ಯಮದತ್ತ ಸೆಳೆಯುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಗ್ರಾಮೀಣ ಯುವಕರಿಗೆ ಮಣ್ಣಿನ ಫಲವತ್ತತೆಯಿಂದ ಬೆಳೆದಿರುವ ಪದಾರ್ಥಗಳನ್ನು ಮಾರುಕಟ್ಟೆವರೆಗೂ ತಲುಪಿಸುವ ಡಿಜಿಟಲ್ ತಂತ್ರಜ್ಞಾನದವರೆಗೂ ನಾವು ರೈತರ ಪ್ರೋತ್ಸಾಹಿಸಲಿದ್ದೇವೆ. ಮುಂಬರುವ 6 ತಿಂಗಳಲ್ಲಿ ಒಂದು ಸಾವಿರ ಗ್ರಾಮೀಣ ಯುವಕರಿಗೆ ಉದ್ಯೋಗ ನೀಡಿ, ಕೃಷಿ ಉತ್ಪನ್ನಗಳಿಗೆ ಆಧುನಿಕ ಮಾರುಕಟ್ಟೆ ಒದಗಿಸುವ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.ಆ್ಯಪ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್:
ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಂಸ್ಥೆ ಈ ನಿಟ್ಟಿನಲ್ಲಿ ಗಮನಹರಿಸಿದೆ. ರೈತರು ಬೆಳೆದ ಬೆಳೆಗಳಿಗೆ, ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲಾಗುವುದು. ಕಚ್ಚಾವಸ್ತುಗಳಿಗೆ ಮೌಲ್ಯವರ್ಧನೆ ಮಾಡಿ, ಪ್ಯಾಕೇಜಿಂಗ್ ಮೂಲಕ ಗ್ರಾಹಕರಿಗೆ ತಲುಪಿಸುವ ಗುರಿ ಇದೆ. ಆ್ಯಪ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಕ್ರಾಂತಿಯನ್ನೇ ಮಾಡುವ ಗುರಿ ಹೊಂದಿದ್ದೇವೆ ಎಂದು ಡಾ.ಹುಲ್ಲುನಾಚೇಗೌಡ ವಿವರಿಸಿದರು.ಸಂಸ್ಥೆಯ ಚರಣ್ ನಾಯ್ಡು, ರವಿ, ಯೋಗರಾಜ, ವಿಶ್ವನಾಥ, ಲಿಖಿತ್ ಜ್ಯೋತಿರ್ಮಯಿ ಇತರರು ಇದ್ದರು. ಉದ್ಯೋಗಿಗಳ ಆಯ್ಕೆ ಪ್ರಕ್ರಿಯೆ ನಿರಂತರ
ಉದ್ಯೋಗ ಮೇಳಕ್ಕೆ ಬಂದ ಅಭ್ಯರ್ಥಿಗಳಿಗೆ ಸಂದರ್ಶನ ಮಾಡಿ, ಮೊದಲ ಹಂತದಲ್ಲಿ 17 ಜನರಿಗೆ ಉದ್ಯೋಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಉದ್ಯೋಗಿಗಳ ಆಯ್ಕೆ ಪ್ರಕ್ರಿಯೆ ನಿರಂತರವಾಗಿರುತ್ತದೆ. ಆಧುನಿಕ ಯುಗಕ್ಕೆ ತಕ್ಕಂತೆ ಆ್ಯಪ್, ಡಿಜಿಟಲ್ ತಂತ್ರಜ್ಞಾನ ಮೂಲಕ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿ, ರೈತರಿಗೆ ಆಸರೆಯಾಗುವ ಗುರಿ ಇದೆ.ಮಹದೇವಪ್ಪ ದಿದ್ದಿಗೆ, ಮೈಕ್ರೋಬಿ ಫೌಂಡೇಷನ್ ಜಿಲ್ಲಾ ಸಂಚಾಲಕ