ಕಂದಾಯ ಇಲಾಖೆ ದಾಖಲೆ ಡಿಜಿಟಲೀಕರಣ<bha>;</bha> ಬಳ್ಳಾರಿ ಫಸ್ಟ್‌

KannadaprabhaNewsNetwork | Published : Dec 8, 2023 1:45 AM

ಸಾರಾಂಶ

ಕಂದಾಯ ಸಚಿವರ ಇಚ್ಛಾಶಕ್ತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅಭಿಲೇಖಾಲಯದಲ್ಲಿ ಹಳೇ ಕಡತಗಳ ಪಟ್ಟಿ ಮತ್ತು ಸೂಚ್ಯಂಕ ಕಾರ್ಯ ಕೈಗೆತ್ತಿಕೊಂಡಿದ್ದು, ಸರ್ಕಾರದ ವೆಬ್‍ಸೈಟ್‍ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲೀಕರಣ ಮಾಡಲಾಗುತ್ತಿದೆ. ಈವರೆಗೆ ಒಟ್ಟು 146063 ಕಡತಗಳನ್ನು ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕಂದಾಯ ಇಲಾಖೆ ದಾಖಲೆಗಳನ್ನು ಡಿಜಿಟಲೀಕರಣ ಮಾಡುವಲ್ಲಿ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಸಚಿವರ ಇಚ್ಛಾಶಕ್ತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅಭಿಲೇಖಾಲಯದಲ್ಲಿ ಹಳೇ ಕಡತಗಳ ಪಟ್ಟಿ ಮತ್ತು ಸೂಚ್ಯಂಕ ಕಾರ್ಯ ಕೈಗೆತ್ತಿಕೊಂಡಿದ್ದು, ಸರ್ಕಾರದ ವೆಬ್‍ಸೈಟ್‍ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲೀಕರಣ ಮಾಡಲಾಗುತ್ತಿದೆ. ಈವರೆಗೆ ಒಟ್ಟು 146063 ಕಡತಗಳನ್ನು ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದರು.

ಕಂದಾಯ ಗ್ರಾಮ:

ಜಿಲ್ಲೆಯಲ್ಲಿ ಒಟ್ಟು 73 ಹೊಸ ಕಂದಾಯ ಗ್ರಾಮಗಳನ್ನಾಗಿ ಪರಿರ್ವತಿಸಲು ಗುರುತಿಸಲಾಗಿದ್ದು, ಈ ಪೈಕಿ 6 ತಿಂಗಳ ಅವಧಿಯಲ್ಲಿ 14 ಪ್ರಾಥಮಿಕ ಅಧಿಸೂಚನೆ ಮತ್ತು 7 ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಒಟ್ಟು 114 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಿ ಕ್ರಿಯಾಯೋಜನೆ ರೂಪಿಸಿಕೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಖಾಸಗಿ ಬೋರ್‌ವೆಲ್‍ಗಳನ್ನು ಬಾಡಿಗೆಗೆ ಪಡೆಯಲಾಗುವುದು ಹಾಗೂ ಕುಡಿಯುವ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದರು.

ಪ್ರಸ್ತುತ ಜಿಲ್ಲಾಧಿಕಾರಿಗಳ ಎಸ್‌ಡಿಆರ್‌ಎಫ್‌ಪಿಡಿ ಖಾತೆಯಲ್ಲಿ ₹37 ಕೋಟಿ ಅನುದಾನ ಲಭ್ಯವಿದ್ದು, ಅನುದಾನದ ಕೊರತೆ ಇರುವುದಿಲ್ಲ. ತಹಸೀಲ್ದಾರರ ಎಸ್‌ಡಿಆರ್‌ಎಫ್ ಖಾತೆಯಲ್ಲಿ ₹212 ಲಕ್ಷಗಳು ಬರ ನಿರ್ವಹಣೆಗೆ ಲಭ್ಯವಿದ್ದು, ತುರ್ತು ಕಾರ್ಯಗಳಾದ ಕುಡಿಯುವ ನೀರಿನ ಸಮಸ್ಯೆ ಮತ್ತು ಮೇವಿನ ಸಮಸ್ಯೆಗಳಿಗೆ ಪರಿಸ್ಥಿತಿ ಅನುಗುಣವಾಗಿ ಬಳಸಿಕೊಳ್ಳಲಾಗುವುದು ಎಂದರು.

ಪ್ರಸ್ತುತ 247132 ಮೆ. ಟನ್ ಮೇವು ಲಭ್ಯವಿದ್ದು, ಮುಂದಿನ 25 ವಾರಗಳಿಗೆ ಸಾಕಾಗುತ್ತದೆ. ಮೇವಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಅಂತರ್ ರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದ್ದು, ಬಳ್ಳಾರಿ ಮತ್ತು ಸಿರುಗುಪ್ಪದಲ್ಲಿ ಮೇವಿನ ಚೆಕ್‍ಪೋಸ್ಟ್‌ಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ ಹೊರರಾಜ್ಯಕ್ಕೆ ಸಾಗಾಣಿಕೆ ಮಾಡಲಾಗುತ್ತಿದ್ದ ಮೇವನ್ನು ಚೆಕ್‍ಪೋಸ್ಟ್‌ಗಳಲ್ಲಿ ಸೀಜ್ ಮಾಡಲಾಗಿದೆ ಎಂದರು.

ಫ್ರುಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಿ:

ಬರ ಪರಿಸ್ಥಿತಿಯಿಂದ ಉಂಟಾದ ಬೆಳೆನಷ್ಟಕ್ಕೆ ಪರಿಹಾರವನ್ನು ಸರ್ಕಾರವು ಫ್ರುಟ್ಸ್ ತಂತ್ರಾಂಶದ ಮೂಲಕ ನೀಡುತ್ತಿದ್ದು, ನೋಂದಣಿ ಮಾಡಿಸಿಕೊಳ್ಳದ ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆಯ ಕಚೇರಿಗೆ ತೆರಳಿ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಕರ್ನಾಟಕ ಇನಾಂ ರದ್ದತಿ ಕಾಯ್ದೆಯಡಿಯಲ್ಲಿ ಜಿಲ್ಲೆಯಲ್ಲಿ ರೀ- ಗ್ರಾಂಟ್‍ಗಾಗಿ ಒಟ್ಟು 13102 ಅರ್ಜಿಗಳು ಸ್ವೀಕೃತಿಯಾಗಿದ್ದು, ಇವುಗಳ ಪೈಕಿ 25 ಅರ್ಜಿಗಳು ತಿರಸ್ಕೃತಗೊಳಿಸಿ 5645 ಅರ್ಜಿಗಳು ರೀ- ಗ್ರಾಂಟ್ ಮಾಡಿ ಪಟ್ಟಾ ನೀಡಲಾಗಿದೆ. ಇನ್ನು ವಿಚಾರಣೆಗೆ 7432 ಬಾಕಿ ಉಳಿದಿರುತ್ತದೆ ಎಂದರು.

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ 2024ರ ಪ್ರಕ್ರಿಯೆ ನಡೆಯುತ್ತಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿ. 9 ಕೊನೆಯ ದಿನವಾಗಿದೆ. ಜಿಲ್ಲೆಯ 18 ವರ್ಷ ತುಂಬಿದ ಎಲ್ಲ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ಮತ್ತು ತಿದ್ದುಪಡಿಗಾಗಿ ತಾಲೂಕು ಕಚೇರಿಗೆ ಅಥವಾ ಸಂಬಂಧಪಟ್ಟ ಬಿಎಲ್‌ಒಗಳನ್ನು ಭೇಟಿ ಮಾಡಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಸುದ್ದಿಗೋಷ್ಠಿಯಲ್ಲಿದ್ದರು.

Share this article