ಕನ್ನಡಪ್ರಭ ವಾರ್ತೆ ಕುಕನೂರು
ನೂತನ ಕುಕನೂರು ತಾಲೂಕಿಗೆ ಇಂದಿರಾ ಕ್ಯಾಂಟೀನ್ ಮಂಜೂರಾಗಿದ್ದು, ₹1.54 ಕೋಟಿ ವೆಚ್ಚದಲ್ಲಿ ಕ್ಯಾಂಟೀನ್ ಕಾರ್ಯಾರಂಭಿಸಲು ಸರ್ಕಾರ ಆದೇಶಿಸಿದೆ.ಬಡ ವರ್ಗದವರಿಗೆ, ಹಸಿದವರಿಗೆ ಕಡಿಮೆ ವೆಚ್ಚದಲ್ಲಿ ಊಟ ಸಿಗಲಿ ಎಂದು ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ನಗರ, ಪಟ್ಟಣ ಕೇಂದ್ರಗಳಲ್ಲಿ ಈ ಹಿಂದೆ ಆರಂಭಿಸಿತ್ತು. ಇದರಿಂದ ಶ್ರಮಿಕ ವರ್ಗಕ್ಕೆ ಹಾಗೂ ಬಡ ವರ್ಗಕ್ಕೆ, ಹಸಿದವರಿಗೆ ಕಡಿಮೆ ವೆಚ್ಚದಲ್ಲಿ ಆಹಾರ ಸಿಗುತ್ತಿತ್ತು. ಇನ್ನು ಹಲವೆಡೆ ಕ್ಯಾಂಟೀನ್ ಬೇಡಿಕೆ ಹೆಚ್ಚಿತ್ತು. ಅಂತಹ ಅವಶ್ಯಕ ಕೇಂದ್ರಗಳಲ್ಲಿ ಕುಕನೂರು ಪಟ್ಟಣಕ್ಕೂ ಕ್ಯಾಂಟೀನ್ ಅವಶ್ಯಕತೆ ಇತ್ತು. ನಿತ್ಯ ಪಟ್ಟಣಕ್ಕೆ ವ್ಯಾಪಾರ, ವಹಿವಾಟು, ಶಾಲಾ, ಕಾಲೇಜು, ಎಪಿಎಂಸಿ ಮಾರುಕಟ್ಟೆ, ಕಚೇರಿಗಳಿಗೆ ಬರುವ ಜನರು, ಕಾರ್ಮಿಕರು ಹೀಗೆ ಜನಜಂಗುಳಿಯಿಂದ ಕುಕನೂರು ತುಂಬಿರುತ್ತದೆ. ಹೊಟೆಲ್ ಗಳಲ್ಲಿ ದುಬಾರಿ ಬೆಲೆಗೆ ಆಹಾರ ಸೇವಿಸುವ ಅನಿವಾರ್ಯತೆ ಇತ್ತು. ಈ ಸಮಸ್ಯೆ ನೀಗಿದಂತಾಗಿದೆ.ಯಲಬುರ್ಗಾ ತಾಲೂಕಿನಿಂದ ಬೇರ್ಪಡೆಯಾದ ನೂತನ ಕುಕನೂರು ತಾಲೂಕು ಕೇಂದ್ರಕ್ಕೆ ಇಂದಿರಾ ಕ್ಯಾಂಟೀನ್ ಅವಶ್ಯಕವಿತ್ತು. ಈ ಬಗ್ಗೆ ಸ್ಥಳೀಯ ನಾಗರಿಕರು ಶಾಸಕ ಬಸವರಾಜ ರಾಯರಡ್ಡಿ ಬಳಿ ಕುಕನೂರು ತಾಲೂಕಿಗೆ ಇಂದಿರಾ ಕ್ಯಾಂಟೀನ್ ಬೇಕು ಎಂದು ಮನವಿ ಸಲ್ಲಿಸಿದ್ದರು. ಶಾಸಕ ಬಸವರಾಜ ರಾಯರಡ್ಡಿ ತಾಲೂಕು ಕೇಂದ್ರಕ್ಕೆ ಕ್ಯಾಂಟೀನ್ ಮಂಜೂರು ಮಾಡಿಸುವುದಾಗಿ ತಿಳಿಸಿದ್ದರು. ಸದ್ಯ ಸರ್ಕಾರ ನೂತನ ಕುಕನೂರು ತಾಲೂಕು ಕೇಂದ್ರಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿ ಆದೇಶಿಸಿದೆ. ಇದರಿಂದ ಕುಕನೂರು ಪಟ್ಟಣದಲ್ಲಿ ₹5ಗೆ ಬೆಳಗಿನ ಉಪಹಾರ, ₹10ಕ್ಕೆ ಊಟ ಸಿಗಲಿದೆ.ಎಪಿಎಂಸಿಯಲ್ಲಿ ನಿರ್ಮಾಣ:ಕುಕನೂರಿಗೆ ಮಂಜೂರಾದ ನೂತನ ಇಂದಿರಾ ಕ್ಯಾಂಟೀನ್ ಕುಕನೂರು ಪಟ್ಟಣದ ಎಪಿಎಂಸಿಯಲ್ಲಿ ಬಹುತೇಕವಾಗಿ ನಿರ್ಮಾಣವಾಗಲಿದೆ. ಎಪಿಎಂಸಿಯಲ್ಲಿ ವಿಶಾಲ ಜಾಗೆ ಇದ್ದು, ಜನರ ಓಡಾಟಕ್ಕೂ ಅನುಕೂಲ ಆಗಲಿದೆ.
ಕುಕನೂರು ನೂತನ ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಕುಕನೂರು ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಅವಶ್ಯಕ ಇತ್ತು. ಇದು ಸಹ ಕುಕನೂರು ತಾಲೂಕಿನ ಜನರ ಬೇಡಿಕೆ ಆಗಿತ್ತು. ಆ ನಿಟ್ಟಿನಲ್ಲಿ ನಾನು ಸರ್ಕಾರಕ್ಕೆ ಕುಕನೂರು ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಅವಶ್ಯಕತೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಸರ್ಕಾರ ಕುಕನೂರು ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿ ಆದೇಶ ಹೊರಡಿಸಿದೆ.- ಬಸವರಾಜ ರಾಯರಡ್ಡಿ, ಶಾಸಕ ಯಲಬುರ್ಗಾ