ಕನ್ನಡಪ್ರಭ ವಾರ್ತೆ ಕೊಪ್ಪಳ
ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಮತ್ತು ಶಾಂತಿ ಕದಡದಂತೆ ಗ್ರಾಮೀಣ ಬೀಟ್ ವ್ಯವಸ್ಥೆ ಕಟ್ಟುನಿಟ್ಟಾಗಿ ಆಗಬೇಕು. ಈ ದಿಸೆಯಲ್ಲಿ ಎಸ್ಪಿ ಕ್ರಮ ವಹಿಸಬೇಕು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕಕುಮಾರ ಹೇಳಿದ್ದಾರೆ.ನಗರದ ಎಸ್ಪಿ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆಗಳ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿಯೂ ಪೊಲೀಸ್ ಬೀಟ್ ಇದ್ದೇ ಇರುತ್ತದೆ. ಆದರೆ, ಅದು ಕಟ್ಟುನಿಟ್ಟಾಗಿ ಆಗಬೇಕು. ಹೀಗೆ ಬೀಟ್‌ನಲ್ಲಿರುವವರಿಗೆ ಜವಾಬ್ದಾರಿ ನೀಡಬೇಕು. ಆ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾದರೆ ಅವರ ವಿರುದ್ಧವೂ ಕ್ರಮವಾಗಬೇಕು ಎಂದರು.ಮಟ್ಕಾ ದಂಧೆ, ಅಕ್ರಮ ಮದ್ಯ ಮಾರಾಟ, ವೇಶ್ಯಾವಾಟಿಕೆ ಸೇರಿದಂತೆ ಮೊದಲಾದವುಗಳ ಮಾಹಿತಿ ಸಂಗ್ರಹಿಸಿ, ಅದರ ವಿರುದ್ಧ ಕ್ರಮವಾಗುವಂತೆ ಬೀಟ್‌ನಲ್ಲಿ ಇದ್ದವರು ಮಾಡಬೇಕು. ಇನ್ನು ಗಾಂಜಾ ಮಾರಾಟ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲು ಕೇವಲ ಕೇಸ್ ಹಾಕಿದರೆ ಸಾಲದು, ಅಷ್ಟು ಕೇಸ್ ಹಾಕಿದ್ದೇವೆ, ಇಷ್ಟು ಕೇಸ್ ಹಾಕಿದ್ದೇವೆ ಎನ್ನುವುದಷ್ಟೇ ಸಾಧನೆಯಲ್ಲ. ಅದನ್ನು ನಿಯಂತ್ರಣ ಮಾಡುವ ದಿಸೆಯಲ್ಲಿ ಕ್ರಮವಾಗಬೇಕು ಎಂದರು.ಜಿಲ್ಲೆ ನನಗೆ ಪರಿಚಯವಿದೆ. ಇಲ್ಲಿ ಈ ಹಿಂದೆ ಅಂಬೇಡ್ಕರ್‌ಗೆ ಪ್ರತಿಮೆಗೆ ಅವಮಾನ ಮಾಡಿದ ಪ್ರಕರಣ ಗೊತ್ತಿದೆ. ಅಂಥ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕು. ಹುಲಿಹೈದರ್‌ನಲ್ಲಿ ನಡೆದ ಘರ್ಷಣೆ ಕುರಿತು ನನಗೆ ಮಾಹಿತಿ ಇದೆ. ಅಲ್ಲಿ ಇಬ್ಬರು ಮೃತಪಟ್ಟಿದ್ದರು. ಅದರಲ್ಲಿ ಪೊಲೀಸರ ವೈಫಲ್ಯ ಇರುವ ಸಾಧ್ಯತೆ ಇದೆ. ಹಾಗಿದ್ದರೆ ಅವರ ವಿರುದ್ಧ ಕ್ರಮವಾಗಿರಬೇಕು. ಈ ಬಗ್ಗೆ ಪರಿಶೀಲಿಸುವೆ. ಕಾರಟಗಿಯಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ತಡೆಯಬೇಕಾಗಿತ್ತು. ಆದರೆ, ಅದು ಆಗಲೇ ಇಲ್ಲ ಎಂದರು.ಕುಂದುಕೊರತೆ ಸಭೆಗಳನ್ನು ಮಾಡಬೇಕು. ಠಾಣಾ ಹಂತದಲ್ಲಿಯೂ ಇದು ನಿರಂತರವಾಗಿ ನಡೆಯಬೇಕು. ಕೇವಲ ರಂಜಾನ್, ಗಣೇಶ ಹಬ್ಬಕ್ಕೆ ಮಾತ್ರ ಮಾಡಲಾಗುತ್ತದೆ. ಆದರೆ, ಅದು ನಿರಂತರವಾಗಿ ಎಲ್ಲ ಹಂತದ ಅಧಿಕಾರಿಗಳ ಮಟ್ಟದಲ್ಲಿಯೂ ನಡೆಯಬೇಕು. ಆದರೆ, ಹೀಗೆ ಮಾಡುವ ವೇಳೆಯಲ್ಲಿ ಕೇವಲ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರುವವರನ್ನು ಕರೆದು ಮಾಡುವುದಲ್ಲ, ಸಾರ್ವಜನಿಕ ಜೀವನದಲ್ಲಿ ಇರುವವರನ್ನು ಕರೆದು ಮಾಡಬೇಕು ಎಂದರು.ಐಜಿಪಿ ಬಿ.ಎಸ್. ಲೋಕೇಶ್ ಇದ್ದರು. ಎಸ್ಪಿ ಯಶೋದಾ ವಂಟಿಗೋಡಿ ಸ್ವಾಗತಿಸಿದರು.ಗಡಿಪಾರು ಮಾಡಿ: ಕೊಲೆ ಆರೋಪ ಸೇರಿದಂತೆ ಮೊದಲಾದ ಕ್ರಿಮಿನಲ್ ಚಟುವಟಿಕೆಯಲ್ಲಿ ಇರುವುದು ಅಲ್ಲದೇ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ತೊಂದರೆ ನೀಡುವುದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ, ಅಂಥವರನ್ನು ಗಡಿಪಾರು ಮಾಡಿ ಮತ್ತು ಅಗತ್ಯ ನಿರ್ದಾಕ್ಷಿಣ್ಯ ಕ್ರಮ ವಹಿಸಿ ಎಂದು ಸಿದ್ನೆಕೊಪ್ಪ ವೀಂಡ್ ಪವರ್ ವಿವಾದದ ಕುರಿತು ಆದೇಶಿಸಿದರು.
ಪ್ರಶಂಸೆ: ಕೊಪ್ಪಳ ಪೊಲೀಸ್ ಆಡಳಿತದ ಕುರಿತು ವ್ಯಾಪಕ ಪ್ರಶಂಸೆಗಳು ವ್ಯಕ್ತವಾದವು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ಮಾತನಾಡಿ, ಡೊಂಬರಳ್ಳಿ ಗ್ರಾಮದ ಯುವಕನ ಕೊಲೆ ಪ್ರಕರಣವನ್ನು ಮೂರೇ ದಿನಗಳಲ್ಲಿ ಭೇದಿಸಿದ್ದಾರೆ. ಕಾತರಕಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಐದೇ ದಿನಗಳಲ್ಲಿ ಭೇದಿಸಿದ್ದು, ಶ್ಲಾಘನೀಯ ಎಂದರು.ಶ್ರೀಗಂಧ ಕಳ್ಳತನ ಅವ್ಯಾಹತ: ಶ್ರೀಗಂಧ ಕಳ್ಳತನ ವ್ಯಾಪಕವಾಗಿ ಆಗುತ್ತಿತ್ತು. ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ತಡೆಯುವ ದಿಸೆಯಲ್ಲಿ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಸ್ವೀಕರಿಸುತ್ತಿಲ್ಲ. ಅರಣ್ಯ ಇಲಾಖೆಯವರು ಸಿಬ್ಬಂದಿ ಇಲ್ಲ ಎನ್ನುತ್ತಿದ್ದಾರೆ. ಹೀಗಾಗಿ, ಶ್ರೀಗಂಧ ಕಳ್ಳತನ ಅವ್ಯಾಹತವಾಗಿದೆ ಎಂದು ರೈತ ಮುಖಂಡ ರಮೇಶ ಬಳೂಟಗಿ ಆರೋಪಿಸಿದರು.