ಕಬ್ಬು ಹಂಗಾಮು ಕೂಡಲೇ ಆರಂಭಕ್ಕೆ ಬೆಳೆಗಾರರ ಆಗ್ರಹ

KannadaprabhaNewsNetwork |  
Published : Nov 03, 2026, 02:45 AM IST
ಮನವಿ ಪತ್ರವನ್ನು ಗ್ರೇಡ್- 2 ತಹಸೀಲ್ದಾರ್ ರವೀಂದ್ರ ನೇಸರ್ಗಿ ಅವರಿಗೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಳೆದ ವರ್ಷದ ಹಂಗಾಮಿನಲ್ಲಿ ಹಲವು ಬಾರಿ ನಡೆಸಿದ ಸಕ್ಕರೆ ಇಳುವರಿ(ರಿಕವರಿ) ಪರಿಶೀಲನೆಯಲ್ಲಿ ಅನೇಕ ಲೋಪದೋಷಗಳು ಕಂಡುಬಂದಿದ್ದವು. ಅದನ್ನು ಸರಿಪಡಿಸಿ ಪಾರದರ್ಶಕತೆ ಕಾಪಾಡುವ ಜವಾಬ್ದಾರಿಯನ್ನು ಕಾರ್ಖಾನೆ ಆಡಳಿತ ಹಾಗೂ ಜಿಲ್ಲಾಡಳಿತ ವಹಿಸಬೇಕು.

ಹಳಿಯಾಳ: ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿ ಕೂಡಲೇ ಕಬ್ಬು ಕಟಾವು ಹಾಗೂ ಅರೆಯುವ ಹಂಗಾಮು ಆರಂಭಿಸಲು ಜಿಲ್ಲಾಧಿಕಾರಿಗಳು ಖುದ್ದು ಮಧ್ಯಸ್ಥಿಕೆ ವಹಿಸಿ ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ಜಂಟಿ ಸಭೆ ಕರೆಯಬೇಕೆಂದು ತಾಲೂಕು ಕಬ್ಬು ಬೆಳೆಗಾರರ ಸಂಘ ಹಾಗೂ ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

ಸೋಮವಾರ ತಾಲೂಕಿನ ಕಬ್ಬು ಬೆಳೆಗಾರರ ನಿಯೋಗವು ತಾಲೂಕಾಡಳಿತ ಸೌಧಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್- 2 ತಹಸೀಲ್ದಾರ್ ರವೀಂದ್ರ ನೇಸರ್ಗಿ ಅವರಿಗೆ ಸಲ್ಲಿಸಿ ಕೂಡಲೇ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯ ಸಭೆಯನ್ನು ಕರೆಯಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮನವಿಯಲ್ಲಿ, ಕಾರ್ಖಾನೆಯ ವ್ಯಾಪ್ತಿಯಲ್ಲಿ ಒಳಪಡುವ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಲಾಗಿದೆ. ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂಬ ದೂರು ಹಲವು ವರ್ಷಗಳಿಂದ ಇದೆ. ಕಳೆದ ವರ್ಷ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಧಾರದಂತೆ ಹಳೆಯ ಯಂತ್ರ ಸ್ಥಳಾಂತರಿಸಿ ಮುಖ್ಯ ಗೇಟಿನ ಬಳಿ ನೂತನ ತೂಕದ ಯಂತ್ರ ಸಿದ್ಧಪಡಿಸಲಾಗಿದೆ. ಆದರೆ ಅದನ್ನು ರೈತರ ಸಮ್ಮುಖದಲ್ಲಿ ಪರಿಶೀಲಿಸಿ ಕಾರ್ಯಾರಂಭಗೊಳಿಸಬೇಕು.ಕಳೆದ ವರ್ಷದ ಹಂಗಾಮಿನಲ್ಲಿ ಹಲವು ಬಾರಿ ನಡೆಸಿದ ಸಕ್ಕರೆ ಇಳುವರಿ(ರಿಕವರಿ) ಪರಿಶೀಲನೆಯಲ್ಲಿ ಅನೇಕ ಲೋಪದೋಷಗಳು ಕಂಡುಬಂದಿದ್ದವು. ಅದನ್ನು ಸರಿಪಡಿಸಿ ಪಾರದರ್ಶಕತೆ ಕಾಪಾಡುವ ಜವಾಬ್ದಾರಿಯನ್ನು ಕಾರ್ಖಾನೆ ಆಡಳಿತ ಹಾಗೂ ಜಿಲ್ಲಾಡಳಿತ ವಹಿಸಬೇಕು.

ಕಳೆದ ವರ್ಷ ಹಲವು ಗ್ರಾಮಗಳಿಗೆ ಗ್ಯಾಂಗ್ ಒದಗಿಸದ ಕಾರಣ ರೈತರು ಆರ್ಥಿಕ ನಷ್ಟ ಅನುಭವಿಸಿದ್ದರಿಂದ ಈ ವರ್ಷ ಹಂಗಾಮು ಆರಂಭಕ್ಕೂ ಮುನ್ನ ಗ್ರಾಮವಾರು ಆದ್ಯತಾ ಪಟ್ಟಿ ಸಿದ್ಧಪಡಿಸಿ, ಲಗಾನಿ ತಾಂಡಾ ಮತ್ತು ಕಾರ್ಮಿಕರ ತಂಡಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು.

ತಾಲೂಕಿನಲ್ಲಿ ಈ ಬಾರಿ ತೀವ್ರ ನೀರಿನ ಕೊರತೆಯಿದ್ದು, ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕಬ್ಬು ಒಣಗುವ ಆತಂಕದಲ್ಲಿರುವಾಗ ಹಂಗಾಮು ವಿಳಂಬವಾದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕಾರ್ಖಾನೆಯ ಅನುಸರಿಸುತ್ತಿರುವ ರೈತ ವಿರೋಧಿ ಧೋರಣೆಯ ಕಾರಣದಿಂದ ಕಬ್ಬು ಕಟಾವು ವಿಳಂಬವಾಗಬಾರದು. ಜಿಲ್ಲಾಧಿಕಾರಿಗಳು ಕೂಡಲೇ ಹಳಿಯಾಳಕ್ಕೆ ಭೇಟಿ ನೀಡಿ ಜಂಟಿ ಸಭೆ ನಡೆಸಿ, ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ನಿಯೋಗದ ಮುಂದಾಳತ್ವವನ್ನು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ ಹಾಗೂ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ ವಹಿಸಿದ್ದರು. ಕಬ್ಬು ಬೆಳೆಗಾರರ ಪ್ರಮುಖರಾದ ಸುರೇಶ ಶಿವಣ್ಣನವರ, ಗಿರೀಶ ಠೊಸುರ, ಸಾತೇರಿ ಗೋಡೆಮನಿ, ರಾಮದಾಸ ಬೆಳಗಾಂವಕರ, ಸಂಜು ಉಪ್ಪೀಣ, ಅನಂತ ಶಿರಗಾಪುರ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ