ಹೊಸಪೇಟೆಯ ಪೊಲೀಸ್ ಸಿಬ್ಬಂದಿಗೆ ವಸತಿ ಭಾಗ್ಯ: ಸಚಿವ ಕೆ.ಎಸ್ ಬಸವಂತಪ್ಪ

KannadaprabhaNewsNetwork |  
Published : Nov 03, 2026, 02:45 AM IST
ಫೋಟೋವಿವರ- (2ಎಚ್‌ಪಿಟಿ1)  ಹೊಸಪೇಟೆ ನಗರದ ಡಿ.ಎ.ಆರ್ ಆವರಣದಲ್ಲಿ ಸೋಮವಾರ ನೂತನ ವಸತಿ ಗೃಹ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಉದ್ಘಾಟಿಸಿದರು | Kannada Prabha

ಸಾರಾಂಶ

ಮೊದಲ ಹಂತದಲ್ಲಿ ಒಟ್ಟು 60 ವಸತಿ ಗೃಹಗಳು ಮಂಜೂರಾಗಿದ್ದು, ಪ್ರಸ್ತುತ 10.97 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ 36 ವಸತಿ ಗೃಹಗಳನ್ನು ವಿತರಿಸಲಾಗಿದೆ. ಎರಡನೇ ಹಂತದ ಕಾಮಗಾರಿ ಮುಕ್ತಾಯಗೊಂಡ ತಕ್ಷಣ ಉಳಿದ ಮನೆಗಳನ್ನು ಸಿಬ್ಬಂದಿಗೆ ಹಂಚಿಕೆ ಮಾಡಲಾಗುವುದು.

ಹೊಸಪೇಟೆ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಯ ವಸತಿ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ, ಮೊದಲ ಹಂತದ ಯೋಜನೆಯಡಿ ರೂ. 10.97 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 36 ನೂತನ ವಸತಿ ಗೃಹಗಳನ್ನು ಅರ್ಹ ಸಿಬ್ಬಂದಿಗೆ ಹಂಚಿಕೆ ಮಾಡಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.ನಗರದ ಡಿ.ಎ.ಆರ್ ಆವರಣದಲ್ಲಿ ಸೋಮವಾರ ಜಿಲ್ಲಾ ಪೋಲಿಸ್ ಹಾಗೂ ಕರ್ನಾಟಕ ರಾಜ್ಯ ಪೋಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಜಿಲ್ಲೆಯ 36 ಪೊಲೀಸ್ ಸಿಬ್ಬಂದಿಗಳ ನೂತನ ವಸತಿ ಗೃಹ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಮೊದಲ ಹಂತದಲ್ಲಿ ಒಟ್ಟು 60 ವಸತಿ ಗೃಹಗಳು ಮಂಜೂರಾಗಿದ್ದು, ಪ್ರಸ್ತುತ 10.97 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ 36 ವಸತಿ ಗೃಹಗಳನ್ನು ವಿತರಿಸಲಾಗಿದೆ. ಎರಡನೇ ಹಂತದ ಕಾಮಗಾರಿ ಮುಕ್ತಾಯಗೊಂಡ ತಕ್ಷಣ ಉಳಿದ ಮನೆಗಳನ್ನು ಸಿಬ್ಬಂದಿಗೆ ಹಂಚಿಕೆ ಮಾಡಲಾಗುವುದು.

ನಾಗರಿಕರ ರಕ್ಷಣೆ ಮಾಡುವ ಪ್ರಮುಖ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿರುವುದರಿಂದ, ಪೊಲೀಸರಿಗೆ ಮತ್ತು ಅವರ ಕುಟುಂಬದವರಿಗೆ ವಸತಿ ಸೌಲಭ್ಯ ಕಲ್ಪಿಸುವುದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವಸತಿ ಗೃಹಗಳಲ್ಲಿ ವಾಸಿಸುವ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಅನ್ಯೋನ್ಯತೆಯಿಂದ, ಯಾವುದೇ ಕಲಹಗಳಿಲ್ಲದೆ ಸಹಬಾಳ್ವೆಯಿಂದ ಇರಬೇಕು ಎಂದು ಸಲಹೆ ನೀಡಿದರು.ಕಟ್ಟಡಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಯಾವುದೇ ಸಣ್ಣಪುಟ್ಟ ವ್ಯತ್ಯಾಸಗಳು ಅಥವಾ ದುರಸ್ತಿಗೆ ಬಂದರೆ ಅವುಗಳನ್ನು ತಕ್ಷಣವೇ ಸರಿಪಡಿಸಿ ಕೊಡಲಾಗುವುದು. ಜೊತೆಗೆ ವಸತಿ ಗೃಹಗಳ ಆವರಣದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಹಾಗೂ ಪೊಲೀಸ್ ಸಿಬ್ಬಂದಿಗೆ ಬೇಕಾದ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ವಿಶೇಷವಾಗಿ ಈ ವಸತಿ ಗೃಹಗಳ ಕಟ್ಟಡಗಳನ್ನು ವಿಜಯನಗರ ಸಾಮ್ರಾಜ್ಯವನ್ನು ಆಳಿದ ಐತಿಹಾಸಿಕ ರಾಜವಂಶರಾದ ಸಂಗಮ, ಸಾಳುವ ಮತ್ತು ತುಳುವ ಹೆಸರಿನ ಮೂರು ಬ್ಲಾಕ್‌ಗಳಾಗಿ ವಿಂಗಡಿಸಿದ್ದು, ಕಟ್ಟಡದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.ಶಾಸಕ ಹೆಚ್.ಆರ್. ಗವಿಯಪ್ಪ ಮಾತನಾಡಿ, ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ರೂ. 10 ಕೋಟಿ ಲಭ್ಯವಿದೆ. ಅದರೊಟ್ಟಿಗೆ ಸರ್ಕಾರದಿಂದ ರೂ. 10 ಕೋಟಿ ಮ್ಯಾಚಿಂಗ್ ಗ್ರಾಂಟ್ ನೀಡಿದರೆ, ಇನ್ನೂ 50 ರಿಂದ 60 ಹೆಚ್ಚುವರಿ ವಸತಿ ಗೃಹ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಸಚಿವರಿಗೆ ಮನವಿ ಮಾಡಿದರು.

ಅಲ್ಲದೆ, ಜಿಲ್ಲೆಗೆ ಅತ್ಯಗತ್ಯವಾಗಿರುವ ಸೈಬರ್ ಕ್ರೈಮ್ ಠಾಣೆ ಹಾಗೂ ನೂತನ ಮಹಿಳಾ ಪೊಲೀಸ್ ಠಾಣೆಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿ, ಮುಂದಿನ 1​2 ತಿಂಗಳಲ್ಲಿ ಅನುಮೋದನೆ ಪಡೆದು ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾಧಿಕಾರಿ ಕವಿತಾ ಎಸ್, ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಹೂಡಾ ಅಧ್ಯಕ್ಷ ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸದಸ್ಯ ಡಿ. ವೆಂಕಟರಮಣ ಸೇರಿದಂತೆ ವಿವಿಧ ಇಲಾಖೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ