ಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದುಳಿದ ಸಮಾಜಗಳು ಸಮಾಜದ ಮುಖ್ಯವಾಹಿನಿಗೆ ಬರದಿದ್ದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.ನಗರದ ರೈತ ಸಭಾಂಗಣದಲ್ಲಿ ಜಿಲ್ಲಾ ಗಂಗಾಮತಸ್ಥರ ಸಂಘ ಹಾಗೂ ಮಂಡ್ಯ ತಾಲೂಕು ಮಹಿಳಾ ಗಂಗಾಮತಸ್ಥರ ಸಂಘದಿಂದ ನಡೆದ ನೂತನ ತಾಲೂಕು ಮಹಿಳಾ ಗಂಗಾಮತಸ್ಥರ ಸಂಘ ಉದ್ಘಾಟನೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ತಾಲೂಕು ಮಹಿಳಾ ಗ್ರಾಪಂ ಸದಸ್ಯರಿಗೆ ಸನ್ಮಾನ ಮತ್ತು ಗಣ್ಯ ವ್ಯಕ್ತಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗಾಮತಸ್ಥ ಸಮುದಾಯದವರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಂಸ್ಕಾರ ಕೊಡಬೇಕು. ಮಕ್ಕಳಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿ ಅವರ ಬೆಳವಣಿಗೆ ಒತ್ತಾಸೆಯಾಗಿ ನಿಂತರೆ ಬಡತನ ಹೋಗಲಾಡಿಸಬಹುದು. ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ, ಗಂಗಾಮತಸ್ಥ ಸಮುದಾಯ ಭವನಕ್ಕೆ ನನ್ನ ವಿಧಾನ ಪರಿಷತ್ ಸದಸ್ಯತ್ವದ ಅನುದಾನದಲ್ಲಿ ೧೦ ಲಕ್ಷ ರು. ಕೊಡುತ್ತೇನೆ. ಸರ್ಕಾರದ ಗಮನಸೆಳೆದು ಇನ್ನೂ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸೋಣ. ವಿದ್ಯಾರ್ಥಿ ನಿಲಯ ಪ್ರಾರಂಭಿಸುವುದರಿಂದ ಮಕ್ಕಳಿಗೆ ಒಳ್ಳೆಯ ನೆಲೆಯಾಗುತ್ತದೆ ಎಂದರು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ರಾಜ್ಯದ ೩೧ ಜಿಲ್ಲೆಗಳಲ್ಲಿ ಗಂಗಾಮತಸ್ಥ ಸಮುದಾಯ ವ್ಯಾಪಿಸಿದೆ. ಮೀನುಗಾರ ಸಮಾಜ ರಾಜಕೀಯವಾಗಿ ಸ್ಥಾನಮಾನ ಪಡೆದುಕೊಳ್ಳಲು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಇದ್ದರೆ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂದರು.
ಸಮಾಜ ಸಂಘಟನೆ ಆಗಬೇಕಾದರೆ ಅಲ್ಲಿ ಮಹಿಳೆಯರ ಸಂಘಟನೆ ಅಗತ್ಯವಾಗಿದ್ದು, ಮಹಿಳೆಯರು ಹಾಗೂ ಯುವಕರು ಮುಂದೆ ಬರದಿದ್ದರೆ ಆ ಸಮಾಜ ಮುಂದೆ ಬರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಯುವಕರು ಹಾಗೂ ಮಹಿಳೆಯರು ಸಮಾಜದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಬೇಕು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಜೊತೆ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಕಲ್ಬುರ್ಗಿಯ ತಿಪ್ಪಣ್ಣ ಕಮಕನೂರು ಮಾತನಾಡಿ, ವಿಧಾನಸೌಧದ ಮುಂದೆ ನಾಡಪ್ರಭು ಕೆಂಪೇಗೌಡ, ಬಸವಣ್ಣ, ಭಕ್ತ ಕನಕದಾಸ ಪ್ರತಿಮೆ ಇರುವಂತೆ ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಉನ್ನತವಾಗಿ ವ್ಯಾಸಂಗ ಮಾಡಲು ದಾರಿದೀಪವಾಗುತ್ತವೆ. ಈಗಾಗಲೇ ಗಂಗಾಮತಸ್ಥ ಸಮುದಾಯ ಭವನಕ್ಕೆ ೫ ಲಕ್ಷ ರು.ಅನುದಾನ ನೀಡಿದ್ದೇನೆ. ಮುಂದೆ ಇನ್ನೂ ೫ ಲಕ್ಷ ರು. ಬಿಡುಗಡೆ ಮಾಡುವ ಜೊತೆಗೆ ಒಟ್ಟಾರೆ ೨೦ ಲಕ್ಷ ರು. ಅನುದಾನವನ್ನು ಗಂಗಾಮತಸ್ಥ ಸಮುದಾಯ ಭವನಕ್ಕೆ ನೆರವು ನೀಡುತ್ತೇನೆ. ಮುಖ್ಯಮಂತ್ರಿಗಳ ವಿಶೇಷ ಅನುದಾನ ಹಾಕಿಸಿ ಅರ್ಧಕ್ಕೆ ನಿಂತಿರುವ ಸಮುದಾಯ ಭವನಗಳನ್ನು ಪೂರ್ಣಗೊಳಿಸಿ ಸಮುದಾಯದ ಅಭಿವೃದ್ಧಿಗೆ ಜೊತೆಗಿರುವುದಾಗಿ ಹೇಳಿದರು.ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾ ಗಂಗಾಮತಸ್ತರ ಸಂಘದ ಅಧ್ಯಕ್ಷ ಎಸ್.ರಮೇಶ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಿವಕುಮಾರಿ, ರಾಜ್ಯ ಗಂಗಾಮತಸ್ಥರ ಸಂಘದ ಗೌರವ ಅಧ್ಯಕ್ಷ ಟಿ.ಕೃಷ್ಣಯ್ಯ, ಜಿಲ್ಲಾ ಗಂಗಾಮತಸ್ಥರ ಸಂಘದ ಸಹ ಕಾರ್ಯದರ್ಶಿ ಉಮೇಶ್ ಹಾಡ್ಯ, ಕನ್ನಂಬಾಡಿ ಕುಮಾರ್, ಆರ್‌ಎಪಿಸಿಎಂಎಸ್ ನಿರ್ದೇಶಕ ಎಂ.ಪಿ.ಶ್ರೀಧರ್, ತಾಲೂಕು ಮಹಿಳಾ ಗಂಗಾಮತಸ್ಥರ ಸಂಘದ ಅಧ್ಯಕ್ಷೆ ಎಂ.ಎಲ್.ಲಿಂಗರಾಜಮ್ಮ, ಗೌರವ ಅಧ್ಯಕ್ಷೆ ಪುಷ್ಪಲತಾ, ಕಾರ್ಯಾಧ್ಯಕ್ಷೆ ಶಿಲ್ಪ, ಪ್ರಧಾನ ಕಾರ್ಯದರ್ಶಿ ರಾಧಾಮಣಿ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಹೊರಟ ಮೆರವಣಿಗೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಉತ್ತೀರ್ಣರಾದ ಮಕ್ಕಳಿಗೆ ಜಿಲ್ಲಾ ಮಟ್ಟದ ಪುರಸ್ಕಾರ, ತಾಲೂಕು ಮಹಿಳಾ ಗ್ರಾಪಂ ಸದಸ್ಯರಿಗೆ ಸನ್ಮಾನ ಹಾಗೂ ಗಣ್ಯ ವ್ಯಕ್ತಿಗಳಿಗೂ ಅಭಿನಂದನೆ ಸಲ್ಲಿಸಲಾಯಿತು.