ಇಂದು ಮಂಡ್ಯದಲ್ಲಿ ಪ್ರಥಮಬಾರಿಗೆ ಮುಕ್ತ ರಾಷ್ಟ್ರೀಯ ಕರಾಟೆ ಪಂದಾವಳಿ ನಡೆಯುತ್ತಿದೆ, ವಿವಿಧ ರಾಜ್ಯಗಳಿಂದ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದು, ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ, ಪ್ರಮಾಣ ಪತ್ರ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಕರಾಟೆಯು ಏಷ್ಯನ್ ಮತ್ತು ಒಲಿಂಪಿಕ್ ಕ್ರೀಡೆಯಾಗಿ ಬೆಳೆಯುತ್ತಿದೆ ಎಂದು ಕೋಲಾರ ಪವನ್ ದೈಹಿಕ ಶಿಕ್ಷಣ ಕಾಲೇಜಿನ ಉಪಪ್ರಾಂಶುಪಾಲ ಎಂ.ಸುರೇಶ್ ಹೇಳಿದರು.
ನಗರದ ಹೌಸಿಂಗ್ ಬೋರ್ಡ್ ಬಡಾವಣೆ ಸಮೀಪವಿರುವ ಕಾವೇರಿ ಸಭಾಂಗಣದಲ್ಲಿ ಓಕಿನೋವಾ ಬುಡೋಕೈ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ, ಗೋಜು ಯೋ ಸೇವಕೈ ಕರಾಟೆ ಡೋ ಇಂಡಿಯಾ ಆಯೋಜಿಸಿದ್ದ ಮಂಡ್ಯ ಷುಗರ್‌ಕೇನ್ ಕಪ್-೨೦೨೬ ಪ್ರಥಮ ಮುಕ್ತ ರಾಷ್ಟ್ರೀಯ ಕರಾಟೆ ಪಂದ್ಯಾವಳಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಹಂತದಲ್ಲಿರುವ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಕರಾಟೆ ಕಲೆಯನ್ನು ಕಲಿಯಬೇಕು. ಅದರಲ್ಲಿ ಉತ್ತಮ ಭವಿಷ್ಯವಿದೆ. ಸ್ವಯಂ ರಕ್ಷಣೆಯೊಂದಿಗೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಪೋಷಕರು ತಮ್ಮ ಮಕ್ಕಳಿಗೆ ಕರಾಟೆಯನ್ನು ಕಲಿಸಿ ಎಂದು ನುಡಿದರು.
ಏಷ್ಯನ್ ಕರಾಟೆ ತೀರ್ಪುಗಾರ ಡಾ.ಎಂ.ಆರ್. ವಿನಯ್‌ಕುಮಾರ್ ಮಾತನಾಡಿ, ಇಂದು ಮಂಡ್ಯದಲ್ಲಿ ಪ್ರಥಮಬಾರಿಗೆ ಮುಕ್ತ ರಾಷ್ಟ್ರೀಯ ಕರಾಟೆ ಪಂದಾವಳಿ ನಡೆಯುತ್ತಿದೆ, ವಿವಿಧ ರಾಜ್ಯಗಳಿಂದ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದು, ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ, ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪ ತಹಸೀಲ್ದಾರ್ ಜೆ.ನಾಗರತ್ನಮ್ಮ, ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಅಧ್ಯಕ್ಷ ಮಂಜು, ನಿವೃತ್ತ ದೈಹಿಕ ಶಿಕ್ಷಕ ಶಿವಲಿಂಗಯ್ಯ, ದಕ್ಷಿಣ ವಲಯ ಟಿಪಿಇಒ ಓಬಯ್ಯ, ಮೈಸೂರು ಡಿಸಿಇಒ ವಿಜಯಕುಮಾರ್, ಆರ್‌ಸಿಎಸ್ ಆಡಳಿತಾಧಿಕಾರಿ ಕಸ್ತೂರಿರಂಗನ್, ದೈಹಿಕ ಶಿಕ್ಷಣ ಶಿಕ್ಷಕಿ ಉಷಾರಾಣಿ, ಅಂತಾರಾಷ್ಟ್ರೀಯ ಕರಾಟೆ ತರಬೇತುದಾರ ವೆಂಕಟೇಶ್, ಲೋಕೇಶ್ ಮೊದಲಿಯಾರ್, ಸಚಿನ್, ಡಾ.ಪ್ರೇಮ್‌ಕುಮಾರ್ ಮತ್ತಿತರರಿದ್ದರು.
ಮಿಮ್ಸ್ ಜಾಗ ಉಳಿಸಿ, ಲಕ್ಷಾಂತರ ಜನರ ಆರೋಗ್ಯ ಕಾಪಾಡಲು ಎಂ.ಎಂ.ಫೌಂಡೇಷನ್ ಆಗ್ರಹಮಂಡ್ಯ:
ಮಂಡ್ಯ ಜಿಲ್ಲೆಯ ಲಕ್ಷಾಂತರ ಜನರ ಆರೋಗ್ಯದ ಆಶಾಕಿರಣವಾಗಿರುವ ಮಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯವಿರುವ ಜಾಗ ರಕ್ಷಿಸಬೇಕು ಎಂದು ಎಂ.ಎಂ.ಫೌಂಡೇಶನ್ ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಆಗ್ರಹಿಸಿದೆ.ಈ ಕುರಿತು ಹೇಳಿಕೆ ನೀಡಿರುವ ಫೌಂಡೇಶನ್ ಅಧ್ಯಕ್ಷ ಮುದ್ದನಘಟ್ಟ ಮಹಾಲಿಂಗೇಗೌಡರು, ಮಿಮ್ಸ್‌ಗೆ ಕಾನೂನು ಬದ್ಧವಾಗಿ ಸೇರಿದ ಜಾಗವನ್ನು ಆಸ್ಪತ್ರೆಯ ವಿಸ್ತರಣೆ, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ, ಟ್ರಾಮಾ ಕೇರ್, ಕ್ಯಾನ್ಸರ್ ಚಿಕಿತ್ಸೆ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ಮರಳಿ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ತಮಿಳು ಕಾಲೋನಿ ಜಾಗ ತೆರವಿಗೆ ಹೈಕೋರ್ಟ್‌ನ ತಡೆಯಾಜ್ಞೆ ಇರುವುದಾಗಿ ಸರ್ಕಾರ ಹಾಗೂ ಅಧಿಕಾರಿಗಳು ಹೇಳಿರುವುದು ವರದಿಯಾಗಿದೆ. 2025ರಲ್ಲಿಯೂ ಈ ಜಾಗದ ವಿಚಾರ ನ್ಯಾಯಾಲಯದಲ್ಲಿದ್ದು, ತಡೆಯಾಜ್ಞೆ ತೆರವಾದ ನಂತರ ಜಾಗವನ್ನು ಮಿಮ್ಸ್‌ಗೆ ನೀಡಬಹುದೆಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. 2015ರ ಹೈಕೋರ್ಟ್ ನಿರ್ದೇಶನ ನೀಡಿ 11 ವರ್ಷವಾಗಿದೆ. ಇನ್ನೂ ಪರಿಹಾರ ಯಾಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.ತಮಿಳು ಕಾಲೋನಿಯ ನಿವಾಸಿಗಳ ತೆರವಿನ ವೇಳೆ ಬಡವರನ್ನು ಬೀದಿಗೆ ತಳ್ಳಬಾರದು. ನಿಜವಾದ ಅರ್ಹ ಕುಟುಂಬಗಳಿಗೆ ಸೂಕ್ತ ಮನೆ, ಮೂಲ ಸೌಲಭ್ಯ, ಗೌರವಯುತ ಪುನರ್ವಸತಿ ಮತ್ತು ಬದುಕಿನ ಭದ್ರತೆಯನ್ನು ಸರ್ಕಾರ ಮೊದಲು ಖಚಿತಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 2026ರ ವರದಿಯ ಪ್ರಕಾರ, ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 36 ಕೋಟಿ ರು. ವೆಚ್ಚದಲ್ಲಿ 576 ಮನೆಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ. ಮಿಮ್ಸ್ ಜಾಗದಲ್ಲಿರುವ ಅರ್ಹ ಕುಟುಂಬಗಳಲ್ಲಿ ಎಷ್ಟು ಮಂದಿಗೆ ಅಲ್ಲಿಗೆ ಪುನರ್ವಸತಿ ಕಲ್ಪಿಸಬಹುದು ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಮಹಾಲಿಂಗೇಗೌಡರು ಕೋರಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.