ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೂ ಖಾಸಗಿ ಕಾನ್ವೆಂಟ್ ಶಾಲೆಗಳ ಮಾದರಿಯಲ್ಲಿ ಉನ್ನತಮಟ್ಟದ ಇಂಗ್ಲಿಷ್ ಶಿಕ್ಷಣ ದೊರೆಯಬೇಕು. ಶಾಲಾ ಮಟ್ಟದಲ್ಲೇ ಶಿಕ್ಷಕರು ಸ್ವಂತ ಮುತುವರ್ಜಿಯಿಂದ ಅಭ್ಯಾಸ ಪುಸ್ತಕ ಸಿದ್ಧಪಡಿಸಿ ತರಬೇತಿ ನೀಡುತ್ತಿರುವುದು ತಾಲೂಕಿಗೆ ಮಾದರಿ ಪ್ರಥಮ ಪ್ರಯತ್ನ ಎಂದು ಸುನಿಲ್‌ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಹರೀಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಸ್ಪೋಕನ್ ಇಂಗ್ಲಿಷ್ ತರಬೇತಿ ತರಗತಿ ಹಾಗೂ ವಿಶೇಷ ಅಭ್ಯಾಸ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಭಾಷಾ ಸಂವಹನ ಕೌಶಲ್ಯ ಅತ್ಯಂತ ಅಗತ್ಯ. ಇಂಗ್ಲಿಷ್ ಭಾಷಾ ಕಲಿಕೆ ಕೇವಲ ನಗರದ ಕಾನ್ವೆಂಟ್‌ಗಳಿಗೆ ಸೀಮಿತವಾಗಬಾರದು. ಅದು ಸರ್ಕಾರಿ ಶಾಲೆಯ ಪ್ರತಿ ಮಗುವಿಗೂ ಸುಲಭವಾಗಿ ನಿಲುಕುವಂತಾಗಬೇಕು ಎಂದು ಆಗ್ರಹಿಸಿದರು.

ಸರ್ಕಾರದ ದ್ವಿಭಾಷಾ ಶಿಕ್ಷಣ ನೀತಿಗೆ ಪೂರಕವಾಗಿ ಶಾಲೆಯಲ್ಲಿ ದಿನನಿತ್ಯ ಇಂಗ್ಲಿಷ್ ಮಾತನಾಡುವ ವಾತಾವರಣ ನಿರ್ಮಿಸಿರುವುದು ಅಭಿನಂದನೀಯ. ಇಂತಹ ನಿರಂತರ ಅಭ್ಯಾಸದಿಂದ ಮಕ್ಕಳಲ್ಲಿ ಇಂಗ್ಲಿಷ್‌ ಕುರಿತು ಇರುವ ಭಯ ದೂರವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

ಶಾಲೆಯ ಶಿಕ್ಷಕರ ಶ್ರಮದಿಂದ ರೂಪುಗೊಂಡಿದ್ದ ಸ್ಪೋಕನ್ ಇಂಗ್ಲಿಷ್ ಅಭ್ಯಾಸ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಪುಸ್ತಕವು ವಿದ್ಯಾರ್ಥಿಗಳ ದೈನಂದಿನ ಸಂವಹನಕ್ಕೆ ಹೆಚ್ಚು ಅನುಕೂಲಕರವಾಗಿದೆ.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್‌ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಮೀನಾಕ್ಷಿ ಹೆಗಡೆ, ಮುಖ್ಯಶಿಕ್ಷಕ ಶಿವಕುಮಾರ್, ಸಿಆರ್‌ಪಿ ಮಂಜುನಾಥ್, ಶಾಲಾ ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.