ಅರ್ಹರಿಗೆ ಗ್ಯಾರಂಟಿ ಯೋಜನೆ ನಿಲ್ಲದು: ಹರೀಶ್‌ ಕುಮಾರ್‌

KannadaprabhaNewsNetwork |  
Published : Jun 18, 2026, 02:45 AM IST
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಹರೀಶ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ನ ಗೃಹಲಕ್ಷ್ಮಿ ಸಹಿತ ಗ್ಯಾರಂಟಿ ಯೋಜನೆ ಅರ್ಹರಿಗೆ ಮುಂದುವರಿಯಲಿದ್ದು, ಅರ್ಹ ಫಲಾನುಭವಿಗಳ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಹರೀಶ್‌ ಕುಮಾರ್‌ ತಿಳಿಸಿದರು.

ಮಂಗಳೂರು: ರಾಜ್ಯ ಕಾಂಗ್ರೆಸ್‌ನ ಗೃಹಲಕ್ಷ್ಮಿ ಸಹಿತ ಗ್ಯಾರಂಟಿ ಯೋಜನೆ ಅರ್ಹರಿಗೆ ಮುಂದುವರಿಯಲಿದ್ದು, ಅರ್ಹ ಫಲಾನುಭವಿಗಳ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಹರೀಶ್‌ ಕುಮಾರ್‌ ತಿಳಿಸಿದರು.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಷ್ಕರಣೆ ಎಂದರೆ ಮರಣ ಹೊಂದಿದವರಿಗೆ ಕೆಲವೆಡೆ ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗುತ್ತಿದೆ, ಇದನ್ನು ನಿಲ್ಲಿಸಬಾರದಾ ? ಆದಾಯ ತೆರಿಗೆ ಪಾವತಿಸುವವರಿಗೆ ಗೃಹಲಕ್ಷ್ಮಿ ಇಲ್ಲ ಎಂದು ಮೊದಲೇ ತಿಳಿಸಲಾಗಿತ್ತು, ಅದನ್ನು ನಿಲ್ಲಿಸಬಾರದಾ? ಪರಿಷ್ಕರಣೆಯಲ್ಲಿ ಅನರ್ಹರನ್ನು ಪತ್ತೆ ಹಚ್ಚಿ ಅವರ ಯೋಜನೆ ನಿಲ್ಲಿಸಲಾಗುತ್ತದೆ. ಕಾಂಗ್ರೆಸ್‌ ಏನು ಹೇಳಿದೆಯೋ ಅದನ್ನು ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಯಶಸ್ವಿಯಾಗಿದೆ. ಅಪಪ್ರಚಾರ ಮಾಡಿದವರೂ ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿ, ಇದೀಗ ಕೆಲವೆಡೆ ಕೆಲವು ಯೋಜನೆಗಳನ್ನು ನಿಲ್ಲಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಪ್ರಯೋಜನ ಅರ್ಹರಿಗೆ ಸಿಗುತ್ತಿದೆ. ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗೆ ಹಣ ನೀಡಿ ಎಂದು ಕೇಂದ್ರಕ್ಕೆ ಕೇಳಿಲ್ಲ, ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಹಣ ನೀಡಿ ಎಂದು ಕೇಳಲಾಗುತ್ತಿದೆ ಎಂದರು.

ಜೂ.23ರಂದು ಮಂಗಳೂರಿನಲ್ಲಿ ಎಐಸಿಸಿ, ಕೆಪಿಸಿಸಿ ನಿರ್ದೇಶನದಲ್ಲಿ ಎಸ್‌ಐಆರ್‌ ಜಾಗೃತಿ ಸಮಾವೇಶ ನಡೆಯಲಿದ್ದು, ಮಂಗಳೂರು ವಿಭಾಗದ ಉಡುಪಿ, ದ.ಕ., ಉ.ಕ., ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಬಿಎಲ್‌ಎ 2ಗಳು ಭಾಗವಹಿಸಲಿದ್ದಾರೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯದ ಐದು ಕಡೆ ಸಮಾವೇಶ ನಡೆಯಲಿದ್ದು, ಒಂದು ಕಡೆ ಸಿಎಂ ಭಾಗವಹಿಸಲಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡ ಪದ್ಮರಾಜ್‌ ಆರ್.ಪೂಜಾರಿ ಮಾತನಾಡಿ, ದೇಶದಲ್ಲಿ ದಿನದಿಂದ ದಿನಕ್ಕೆ ಇಂಧನ ಬೆಲೆ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ಸಂಕಷ್ಟ ಪಡುತ್ತಿದ್ದು, ಜನರ ಕಾಳಜಿ ಇಲ್ಲದ ಕೇಂದ್ರ ಬೆಲೆ ಏರಿಕೆ ನಿಯಂತ್ರಿಸುತ್ತಿಲ್ಲ ಎಂದು ಆರೋಪಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲ ದರ ಕಡಿಮೆಯಾದರೂ ಇಲ್ಲಿ ಇಂಧನ ದರ ಕಡಿಮೆ ಮಾಡಿಲ್ಲ. 6 ತಿಂಗಳಲ್ಲಿ ಬೆಲೆ ಏರಿಕೆ ಡಬಲ್‌ ಆಗಿದೆ. ಆದರೂ ಇಲ್ಲಿನ ಬಿಜೆಪಿ ಎಂಪಿ, ಎಂಎಲ್‌ಎಗಳು ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ. ಕೇಂದ್ರದಿಂದ ಜಿಲ್ಲೆಗೆ ಹೇಳಿಕೊಳ್ಳುವ ಯೋಜನೆಗಳೂ ಬಂದಿಲ್ಲ. ರಾಜ್ಯಕ್ಕೆ ಸಿಗಬೇಕಾದ ಪಾಲೂ ಸಿಗುತ್ತಿಲ್ಲ. ಇದನ್ನು ಪ್ರಶ್ನಿಸುವ ದೈರ್ಯ ನಮ್ಮ ಎಂಪಿಗಳಿಗೆ ಇಲ್ಲ ಎನ್ನುವುದು ಖೇದಕರ ಎಂದರು.

ಡಿಕೆಶಿ ಮೇಲೆ ಅಭಿವೃದ್ಧಿ ನಿರೀಕ್ಷೆ:

ಡಿಕೆ ಶಿವಕುಮಾರ್‌ ಅವರು ಉಪಮುಖ್ಯಮಂತ್ರಿ ಆಗಿದ್ದ ವೇಳೆಯೇ ಜಿಲ್ಲೆಯ ಅಭಿವೃದ್ಧಿ, ಪ್ರವಾಸೋದ್ಯಮ ಪ್ರಗತಿಗೆ ಆಸಕ್ತಿ ವಹಿಸಿ ಸಭೆ ನಡೆಸಿದ್ದರು. ಇದೀಗ ಮುಖ್ಯಮಂತ್ರಿ ಆಗಿರುವ ಡಿಕೆ ಶಿವಕುಮಾರ್‌ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ ಎಂದು ಪದ್ಮರಾಜ್‌ ಹೇಳಿದರು.

ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರ ಪದಗ್ರಹಣ ಕಾರ್ಯಕ್ರಮ ಜೂ.21ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸಮಾರಂಭಕ್ಕೆ ಜಿಲ್ಲೆಯಿಂದಲೂ ಹೆಚ್ಚಿನ ನಾಯಕರು, ಕಾರ್ಯಕರ್ತರು ತೆರಳಲಿದ್ದೇವೆ. ಮೂಲತಃ ದ.ಕ ಜಿಲ್ಲೆಯವರಾದ ಹರಿಪ್ರಸಾದ್‌ ಅವರು ಇಲ್ಲಿನ ಜನರೊಂದಿಗೆ ಹೆಚ್ಚಿನ ಒಡನಾಟದಲ್ಲಿದ್ದಾರೆ. ಅವರು ಪಕ್ಷಕ್ಕೆ ಹೊಸ ಚೈತನ್ಯ ಜಿಲ್ಲೆಯಲ್ಲಿ ನೀಡಲಿದ್ದಾರೆ. ಆರ್‌ಎಸ್‌ಎಸ್‌ ನೋಂದಾಯಿಸಿ, ಆಸ್ತಿ ಮೂಲ ತಿಳಿಸಿ ಎಂದು ಗೃಹ ಸಚಿವರು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಹರೀಶ್‌ ಕುಮಾರ್‌, ನೋಂದಾಣಿ ಮಾಡಿ, ಆಸ್ತಿ, ದೇಣಿಗೆ ಮತ್ತಿತರ ವಿವರಗಳನ್ನು ನೀಡಬಹುದಲ್ಲವೇ ಎಂದರು.

ಪ್ರಮುಖರಾದ ಶುಭೋದಯ ಆಳ್ವಾ, ಶಶಿಧರ ಹೆಗ್ಡೆ, ನೌಫಲ್‌, ಎಸ್.ಅಪ್ಪಿ, ಚಿತ್ತರಂಜನ್‌ ಶೆಟ್ಟಿ ಬೊಂಡಲ, ಅಬ್ದುಲ್‌ ರವೂಫ್‌, ಪ್ರಕಾಶ್‌ ಸಾಲಿಯಾನ್‌, ಸಾಹುಲ್‌ ಹಮೀದ್‌ ಕೆ.ಕೆ. ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈಕಲ್ ಬಳಕೆ ಆರೋಗ್ಯ ವೃದ್ದಿಗೆ ಪೂರಕ: ವಿಜಯಾ ಕೋರಿಶೆಟ್ಟಿ
ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿರಲಿ