ಯಲ್ಲಾಪುರ: ಬೊಮ್ಮನಹಳ್ಳಿಯ ಜಿ.ಟಿ. ಭಟ್ಟರ ವ್ಯಕ್ತಿತ್ವ ಗಮನಿಸಿದರೆ, ಅವರ ನಡೆ ಆದರ್ಶ ಶಿಕ್ಷಕರೆಂಬುದಕ್ಕೆ ಬೇರಾವ ಮಾನ್ಯತೆಯೂ ಅಗತ್ಯವಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಬೊಮ್ಮನಹಳ್ಳಿ ಜಂಗಮ ಅಭಿನಂದನಾ ಗ್ರಂಥವನ್ನು ಕವಿ, ಕಥೆಗಾರ ಜಯಂತ ಕಾಯ್ಕಿಣಿ ಲೋಕಾರ್ಪಣೆಗೊಳಿಸಿ, ಜಿ.ಟಿ. ಭಟ್ಟರಂಥ ಮಾಸ್ತರರು ಪ್ರತಿ ಶಾಲೆಗೊಬ್ಬರಿದ್ದರೆ ಅಲ್ಲಿನ ವಿದ್ಯಾರ್ಥಿಗಳು ಶ್ರೇಷ್ಠರಾಗಿ ಹೊರಹೊಮ್ಮಲು ಸಾಧ್ಯ. ಕೇವಲ ಪಠ್ಯಕ್ಕೊಂದೇ ಸೀಮಿತರಾಗಿರದೇ, ಪಠ್ಯದಾಚೆಯ ಬದುಕಿನ, ಸಮಾಜದ ಕುರಿತಾದ ಅನೇಕ ತರಬೇತಿಗಳನ್ನು ಇಂತಹ ಶಿಕ್ಷಕರು ನೀಡಬಹುದಾಗಿದ್ದು, ಮಕ್ಕಳಿಗೆ ಅಗತ್ಯವಾದ ಹೊಸ ಚಿಂತನೆಯ ಮತ್ತು ಜೀವನದ ಅರ್ಥದ ಪಾಠವನ್ನು ಹಿಂದಿನ ಶಿಕ್ಷಕರು ನೀಡುತ್ತಿದ್ದರು ಎಂದರು.
ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಅಹಲ್ಯಾ ಶರ್ಮಾ ಮಾತನಾಡಿ, ಜಿ.ಟಿ. ಭಟ್ಟರು ತಮ್ಮ ಬದುಕಿನ ಜತೆ ಎಲ್ಲರ ಬದುಕಿಗೆ ದಾರಿದೀಪವಾಗಿದ್ದರು. ಅನೇಕ ವರ್ಷಗಳಿಂದ ಅವರ ಕುಟುಂಬದ ಸದಸ್ಯರಾಗಿ ಹತ್ತಿರದಿಂದ ಕಂಡಿದ್ದೇನೆ. ಎಲ್ಲ ಸಂದರ್ಭದಲ್ಲಿ ಭಟ್ಟರು ಪಾದರಸದಂತೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಹಳ್ಳಿಗಳಲ್ಲೂ ಅವರು ಅಪೂರ್ವ ಸಾಧನೆ ಮಾಡಿದ್ದಾರೆ ಎಂದರು.ಹೊನ್ನಾವರದ ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ ಮಾತನಾಡಿ, ಯಕ್ಷಗಾನದಂತಹ ಕಲೆಯನ್ನೂ ತನ್ನ ವೃತ್ತಿಯ ಜತೆ ಅಳವಡಿಸಿಕೊಂಡು ನಗುವೇ ಜೀವನವೆಂಬಂತೆ ಇಂತಹ ಹಳ್ಳಿಗಳಲ್ಲಿ ಕಲೆಗಳಿಗೆ ಶಕ್ತಿತುಂಬಿ ಭವಿಷ್ಯತ್ತಿನ ಸತ್ಪ್ರಜೆಗಳಾಗಿಸುವಲ್ಲಿ ಜಿ.ಟಿ. ಭಟ್ಟರ ಕೊಡುಗೆ ಅನನ್ಯ ಎಂದರು. ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಇಂದು ದೃಶ್ಯ ಮಾಧ್ಯಮಗಳನ್ನು ನೋಡಿದರೆ ಬೆಳಗಿನಿಂದ ಸಂಜೆಯವರೆಗೂ ಕಷ್ಟ, ನೋವು, ದುಃಖಗಳಂತಹ ಸನ್ನಿವೇಶಗಳನ್ನೇ ನೋಡುವ ಸ್ಥಿತಿ ಬಂದೊದಗಿದೆ. ಆದರೆ, ಜಿ.ಟಿ. ಭಟ್ಟರ ನಗೆಯೇ ಈ ಜಿಲ್ಲೆಯ ಮಣ್ಣಿನ ಸತ್ವವೆನ್ನಬಹುದು ಎಂದರು.
ರಂಗಕರ್ಮಿ ರಮಾನಂದ ಐನಕೈ ಮಾತನಾಡಿದರು. ಮುರಾರಿ ಭಟ್ಟ ಹಿತ್ಲಳ್ಳಿ, ಜಯಲಕ್ಷ್ಮೀ ಹೆಗಡೆ ಬೆದೆಹಕ್ಕಲು ಅಭಿಪ್ರಾಯ ಹಂಚಿಕೊಂಡರು. ರಾ.ರಾ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಾಸುಕಿ ಮಳಗೀಮನೆ ಸನ್ಮಾನ ಪತ್ರ ವಾಚಿಸಿದರು. ಜಿ.ಟಿ. ಭಟ್ಟರ ಪುತ್ರಿಯರಾದ ಡಾ. ಶೀಲಾ, ಉಷಾ, ಜ್ಯೋತಿ ನಿರ್ವಹಿಸಿದರು. ಸಂಘಟಕರಲ್ಲೊಬ್ಬರಾದ ವಿಶ್ವನಾಥ ಹೆಗಡೆ ಬಾಮಣಕೊಪ್ಪ ವಂದಿಸಿದರು.