ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಡವರನ್ನು ಉದ್ಧರಿಸುವ ಯೋಜನೆಗಳಲ್ಲ. ಬಡತನವನ್ನು ವಿಸ್ತರಿಸುವ ಯೋಜನೆ. ದೇಶವನ್ನು ಅಭದ್ರಗೊಳಿಸುವ ಮಹಾಮೋಸದಾಟ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.ರನ್ನಬೆಳಗಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ ನಿವಾಸದಲ್ಲಿ ಅಭ್ಯರ್ಥಿ ಗದ್ದಿಗೌಡರ ಪರಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಬಿಟ್ಟು ಬಲಿಷ್ಠ ಭಾರತ ನಿರ್ಮಾಣ ಅಸಾಧ್ಯ ಎಂದ ಮೋದಿಜಿಯವರನ್ನು ಅಲ್ಪಸಂಖ್ಯಾತರು ಮತ್ತು ದಲಿತರು ನಿಮ್ಮ ಏಳ್ಗೆ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಬೆಂಬಲಿಸಲೇಬೇಕಿದೆ. ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದೆ ಎಂದು ದೂರಿದರು.
ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಒಡೆದಾಳುವ ಕಾಂಗ್ರೆಸ್ ಬಳಿ ಯಾವುದೇ ಬಡವರ ಕಲ್ಯಾಣ ಯೋಜನೆಗಳಿಲ್ಲ, ಕಳೆದ 23 ವರ್ಷಗಳಿಂದ ಸಾಂವಿಧಾನಿಕ ಹುದ್ದೆ ಅಲಂಕರಿಸಿ ಜಗತ್ತಿನ ವಿಶ್ವಾಸ ಗಳಿಸಿರುವ ಶ್ರೇಷ್ಠ ನಾಯಕ, ಅಭಿವೃದ್ಧಿಯ ಹರಿಕಾರ ಮೋದಿಜಿಯಿಂದ ಮಾತ್ರ ದೇಶ ಮತ್ತು ನಮ್ಮೆಲ್ಲರ ಅಭಿವೃದ್ಧಿ ಸಾಧ್ಯ. ಸಚಿವ ತಿಮ್ಮಾಪುರ ಮತ್ತು ಕೆ.ಎಚ್.ಮುನಿಯಪ್ಪ ಪಥ ಬದಲಾಯಿಸಿ ಕುಡಚಿ-ಬಾಗಲಕೋಟೆ ರೈಲ್ವೆ ಕಾಮಗಾರಿ ವಿಳಂಬಕ್ಕೆ ಕಾರಣೀಭೂತರಾಗಿದ್ದಾರೆ. ಸರಳ ಸಜ್ಜನಿಕೆಯ ಗದ್ದಿಗೌಡರು 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದರು.ಶಾಸಕ ಸಿದ್ದು ಸವದಿ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಎಂಬ ಮಕ್ಮಲ್ ಟೋಪಿ ಹಾಕುತ್ತಾ ತುಷ್ಟೀಕರಣ ಮಾಡುತ್ತಿದೆ, ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ಅಭ್ಯರ್ಥಿ ಗದ್ದಿಗೌಡರ ಮಾತನಾಡಿ, ಮೋದೀಜಿಯವರ ಅಭಿವೃದ್ಧಿ ಕಾರ್ಯ ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ಮೋದೀಜಿ ಮತ್ತೊಮ್ಮೆ ಪ್ರಧಾನಿಯಾಗಲು ತಮ್ಮನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ಕೋರಿದರು.ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಸಂಗನಗೌಡ ಕಾತರಕಿ, ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ನಾಗಪ್ಪ ಅಂಬಿ, ಕೆ.ಆರ್. ಮಾಚಪ್ಪನವರ, ಸಿದ್ದುಗೌಡ ಪಾಟೀಲ, ರಾಜುಗೌಡ ಪಾಟೀಲ, ವಕೀಲ ಬಿ.ಆರ್. ದೊಡ್ಡಟ್ಟಿ, ರುದ್ರಪ್ಪ ಅಡವಿ, ಹನುಮಂತ ತುಳಸಿಗೇರಿ, ಕಲ್ಲಪ್ಪ ಸಬರದ, ಬಸು ಮಳಲಿ, ಶಿವಪ್ಪ ಶಿರೋಳ,ಗಿರೀಶ ಶಿರೋಳ, ಮಹಾಲಿಂಗ ಪುರಾಣಿಕ, ಗುರು ಶಿರೋಳ, ಮಹಾದೇವ ಪಾಟೀಲ, ಪ್ರಕಾಶ ಹಂಜಿ, ಮಲ್ಲು ದಲಾಲ, ಗುರುಗೌಡ ಪಾಟೀಲ, ಮಹೇಶ ಪಾಶ್ಚಾಪುರ, ಪಮ್ಮು ಬಂದಕ್ಕನವರ, ಸುನಿಲ ಮರನೂರ ಇತರರಿದ್ದರು.