ಶಿರಸಿ: ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಗ್ರಂಥ ಸಮಿತಿ ಪ್ರಕಟಿಸಿದ ಯಕ್ಷ ಹಂಸ ಕೃತಿಯ ಬಿಡುಗಡೆ ನಗರದ ಸುಪ್ರಿಯಾ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆಯಿತು.ಮಂಗಳವಾರ ನಡೆದ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿದ ಹೆಗ್ಗೋಡು ನೀನಾಸಂ ಮುಖ್ಯಸ್ಥ ಕೆ.ವಿ. ಅಕ್ಷರ, ಹೊಸ್ತೋಟ ಮಂಜುನಾಥ ಭಾಗವತ ಅವರ ಕುರಿತು ದಂತಕತೆಗಳು ಸಾಕಷ್ಟಿದ್ದವು ಎಂದು ಅವರ ಒಡನಾಟ ನೆನಪಿಸಿಕೊಂಡರು. ಯಕ್ಷಗಾನ, ತಾಳಮದ್ದಲೆ ಬಹುಸಂಖ್ಯಾತ ರಂಗಭೂಮಿ. ಆದರೆ, ಯಕ್ಷಗಾನದಲ್ಲಿ ಕೆಲಸ ಮಾಡುವವರು ಪ್ರಸಿದ್ಧಿಗೆ ಬರುತ್ತಿಲ್ಲ. ಯಕ್ಷಗಾನ ಹಾಗೂ ತಾಳಮದ್ದಲೆಯನ್ನು ನೋಡುವ ಕಣ್ಣುಗಳನ್ನು ಕಳೆದುಕೊಳ್ಳುತ್ತಿರುವುದು ಕಾರಣ ಎಂದರು.
ಹಿರಿಯ ವಿದ್ವಾಂಸ ಪ್ರಭಾಕರ ಜೋಶಿ, ಹೊಸ್ತೋಟ ಭಾಗವತರ ಕುರಿತಾದ ಪುಸ್ತಕಕ್ಕೆ ಪ್ರಧಾನ ಮಾರ್ಗದರ್ಶಕನಾಗಿದ್ದು, ಬದುಕಿನಲ್ಲಿ ನನಗೆ ದೊಡ್ಡ ಗೌರವ ಸಿಕ್ಕಂತಾಗಿದೆ. ಹೊಸ್ತೋಟ ಭಾಗವತರು ಒಂದು ಅದ್ಭುತ. ಅವರು ಮಾಡಿದ ಕೆಲಸ ಮನುಷ್ಯರಿಂದ ಸಾಧ್ಯವಿಲ್ಲ. ಹೊಸ್ತೋಟ ಭಾಗವತರು ದಕ್ಷಿಣೋತ್ತರ ಕನ್ನಡದಲ್ಲಿ ಯಕ್ಷಗಾನದ ಯುಗ ಪರಿವರ್ತಕರು. ಯಕ್ಷಗಾನದಲ್ಲಿ ಅಗಾಧವಾದ ಕೆಲಸ ಮಾಡಿದ್ದಾರೆ. ವೇಷಧಾರಿ, ಗುರು, ಕವಿ, ಮದ್ದಳೆಗಾರ, ಭಾಗವತ ಹೀಗೆ ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ತಜ್ಞರಾಗಿದ್ದರು ಎಂದರು.ಮುಖ್ಯ ಅತಿಥಿಗಳಾದ ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ, ಹೊಸ್ತೋಟ ಮಂಜುನಾಥ ಭಾಗವತರು ಜೀವನದಲ್ಲಿ ವೈರಾಗ್ಯಮೂರ್ತಿಯಾಗಿ ಯಕ್ಷಗಾನದಲ್ಲಿ ಅತಿದೊಡ್ಡ ಕೆಲಸ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಮೊಟ್ಟ ಮೊದಲು ಹೆಣ್ಣುಮಕ್ಕಳಿಗೂ ಯಕ್ಷಗಾನ ಕಲಿಸಿದರು. ಯಕ್ಷಗಾನದ ಎಲ್ಲ ಪ್ರಕಾರಗಳಲ್ಲಿ ದುಡಿದ ಮಹಾನಭಾವರು ಎಂದು ಬಣ್ಣಿಸಿದರು.ಪ್ರಕಾಶಕ, ಸಾಹಿತಿ ಕಿರಣ ಉಪಾಧ್ಯಾಯ ಮಾತನಾಡಿದರು. ಅಶೋಕ ಹಾಸ್ಯಗಾರ, ಸುಬ್ರಾಯ ಕೆರೆಕೊಪ್ಪ ಇತರರು ಇದ್ದರು.ಕಲಾವಿದ ಶಿವಾನಂದ ಹೆಗಡೆ ಕೆರೆಮನೆ ಸ್ವಾಗತಿಸಿದರು. ಗ್ರಂಥ ಸಂಪಾದಕಿ ವಿಜಯನಳಿನಿ ರಮೇಶ ಪ್ರಸ್ತಾವನೆ ಮಾಡಿದರು. ಕವಿ ದಿವಾಕರ ಹೆಗಡೆ ಕೆರೆಹೊಂಡ ಪರಿಚಯಿಸಿದರು. ಶೈಲಜಾ ಗೋರ್ನಮನೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರು, ಒಡನಾಡಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು. ಗ್ರಂಥವನ್ನು ಪಲ್ಲಕ್ಕಿಯ ಮೂಲಕ ಯಕ್ಷಗಾನದ ಹಿಮ್ಮೇಳದ ಮೂಲಕ ಬರಮಾಡಿಕೊಳ್ಳಲಾಯಿತು.