ಬಿ. ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದ್ದು, ನರೇಗಾದಿಂದ ಸರ್ಕಾರಿಗಳು ಶಾಲೆಗಳು ಸಕಲ ಸೌಲಭ್ಯದಿಂದ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿವೆ.
ನರೇಗಾದಡಿಯಲ್ಲಿ ತಾಲೂಕಿನ ಶಾಲೆಗಳಿಗೆ ಆಟದ ಮೈದಾನ, ಹೈಟೆಕ್ ಶೌಚಾಲಯ, ಆಕರ್ಷಕ ಕಮಾನಿನ ಗೇಟಿನೊಂದಿಗೆ ಕಾಂಪೌಂಡ್, ಕೈತೋಟ, ಇಂಗುಗುಂಡಿ ಸೇರಿ ಒಟ್ಟು 9 ಬಗೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಸ್ಥಳೀಯ ಶಾಸಕಿ ಎಂ.ಪಿ. ಲತಾ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವಪ್ರಭು, ತಾಪಂ ಅಧಿಕಾರಿಗಳು ಶಾಲೆಗಳನ್ನು ಮಾದರಿ ಮಾಡಲು ಆದ್ಯತೆ ನೀಡಿದ್ದಾರೆ.ತಾಲೂಕಿನ ಒಟ್ಟು 264 ಶಾಲೆಗಳಲ್ಲಿ 9 ಬಗೆಯ 734 ಕಾಮಗಾರಿಗಳನ್ನು ಅಂದಾಜು ₹31 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿಸಿ ಒಟ್ಟು 48 ಸಾವಿರ ಮಾನವ ದಿನಗಳನ್ನು ಬಳಸಿಕೊಳ್ಳಲಾಗುತ್ತಿದೆ.
7 ಅಡಿ ಎತ್ತರದ ಕಾಂಪೌಂಡ್‌ಗಳು ತಾಲೂಕಿನ ಜಿ. ದಾದಾಪೂರ, ಗೌರಿಹಳ್ಳಿ, ಅರಸೀಕೆರೆ, ಕಾನಹಳ್ಳಿ, ತೌಡೂರು ಶಾಲೆಗಳಲ್ಲಿ ಪೂರ್ಣಗೊಂಡಿವೆ. ಬಳಿಗನೂರು, ಗೌರಿಪುರ, ಗಜಾಪುರ, ನೀಲುವಂಜಿ ಶಾಲೆಗಳಲ್ಲಿ ಪ್ರಗತಿಯಲ್ಲಿವೆ. ಕೆಲವು ಕಡೆ ಜಾಗದ ಕೊರತೆ ಹಾಗೂ ಇತರೆ ಸಮಸ್ಯೆಗಳಿಂದ ಕೂಡಿದ್ದು, ಗ್ರಾಮಸ್ಥರ ಸಹಕಾರದಲ್ಲಿ ಕಾಮಗಾರಿ ಕೈಗೊಳ್ಳಲು ಪ್ರಯತ್ನಿಸಲಾಗುತ್ತಿದೆ.264 ಶಾಲೆಗಳ ಪೈಕಿ 182 ಶಾಲೆಗಳಿಗೆ ತಲಾ ₹5.20 ಲಕ್ಷ ಅಂದಾಜು ಮೊತ್ತದಲ್ಲಿ ಹೈಟೆಕ್ ಶೌಚಾಲಯ ಕಾಮಗಾರಿ ನಿರ್ಮಾಣ ಮಾಡುವ ಗುರಿ ಹೊಂದಿದ್ದು, 159 ಶೌಚಾಲಯಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಕೆಲವು ಕಡೆ ಸಮಸ್ಯೆ ಇದ್ದು, ಅನುಮೋದನೆ ಪಡೆದು ನಿರ್ಮಾಣ ಮಾಡಲಾಗುತ್ತದೆ. 3- 4 ಕಡೆ ಶೌಚಾಲಯ ಕಾಮಗಾರಿ ಪೂರ್ಣಗೊಂಡಿದ್ದರೆ ಇನ್ನೂ ಕೆಲವು ಕಡೆ ಪ್ರಗತಿಯಲ್ಲಿವೆ.
ಚನ್ನಹಳ್ಳಿ, ಹಾರಕನಾಳು ದೊಡ್ಡ ತಾಂಡ, ಬಾಗಳಿಗಳಲ್ಲಿ ಅಡುಗೆ ಕೋಣೆ ಹಾಗೂ ಅಡುಗೆ ಕೊಣೆಯಿಂದ ಬರುವ ನೀರು, ಶೌಚಾಲಯದ ನೀರು ವ್ಯರ್ಥವಾಗದಂತೆ ₹40 ಸಾವಿರ ವೆಚ್ಚದಲ್ಲಿ ಬಚ್ಚಲುಗುಂಡಿಗಳನ್ನು ನಿರ್ಮಿಸಲಾಗುತ್ತಿದೆ.ಶಾಲಾ ಕೈತೋಟ:
ಶಾಲೆಗಳ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಒಟ್ಟು ₹40 ಸಾವಿರ ವೆಚ್ಚದಲ್ಲಿ ತೋಟಗಾರಿಕೆ ಸಹಾಯದೊಂದಿಗೆ ವಿವಿಧ ರೀತಿಯ ತರಕಾರಿ, ಹಣ್ಣು ಹಾಗೂ ಗಿಡಗಳನ್ನು ಬೆಳೆಸುವ ಪೌಷ್ಟಿಕ ಆಹಾರದ ಕೈತೋಟ ಮಾಡಲಾಗುತ್ತದೆ.ಇಕೋ ಪಾರ್ಕ್:
ತಾಲೂಕಿನ ಆದರ್ಶ ವಿದ್ಯಾಲಯ, ಮುತ್ತಿಗಿ ಸರ್ಕಾರಿ ಪ್ರೌಢಶಾಲೆ, ನೀಲವಂಜಿ ಪ್ರಾಥಮಿಕ ಶಾಲೆಗಳಲ್ಲಿ 2 ಎಕರೆ ಪ್ರದೇಶದಲ್ಲಿ ಇಕೋ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ.ಬಣ್ಣಗಳ ಚಿತ್ತಾರ:
ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಕಾಂಪೌಂಡ್, ಗೇಟ್‌ಗಳಿಗೆ ಆಕರ್ಷಕ ಬಣ್ಣವನ್ನು ವಿವಿಧ ಚಿತ್ರಗಳನ್ನು ಗೋಡೆಯ ಮೇಲೆ ಬಿಡಿಸಲು, ಗ್ರಾಪಂ ಸಹಕಾರದಿಂದ 15ನೇ ಹಣಕಾಸು ಯೋಜನೆಯ ಹಣ ಬಳಸಿಕೊಳ್ಳುವ ಚಿಂತನೆ ಇದೆ.ಆಟದ ಮೈದಾನ:
ಆಟದ ಮೈದಾನಕ್ಕೆ ₹3.6 ಲಕ್ಷದವರೆಗೆ ಅಂಕಣವಾರು ಅಂದಾಜು ಮೊತ್ತ ನಿಗದಿಪಡಿಸಲಾಗಿದೆ. ಕಬಡ್ಡಿ, ಖೋಖೋ, ವಾಲಿಬಾಲ್, ಬಾಸ್ಕೆಟ್‌ಬಾಲ್, ಅಂಕಣ ಮಾಡಲಾಗುವುದು. ಸ್ಥಳ ಲಭ್ಯತೆ ಆಧಾರವಾಗಿ 84 ಆಟದ ಮೈದಾನ ಅಭಿವೃದ್ಧಿಗೊಳಿಸಲಾಗುತ್ತಿದೆ.ಮಾದರಿ ಶಾಲೆ:ನರೇಗಾ ಅನುದಾನದಲ್ಲಿ ಬಳಸಿಕೊಂಡು 9 ವಿವಿಧ ಬಗೆಯ ಕಾಮಗಾರಿಗಳನ್ನು ಅಂದಾಜು ₹31 ಕೋಟಿಯಲ್ಲಿ ಗುಣಮಟ್ಟದಿಂದ ನಿರ್ಮಾಣ ಮಾಡಲಾಗುವುದು. ಈ ಮೂಲಕ ತಾಲೂಕಿನ ಮಾದರಿ ಶಾಲೆಯಾಗಿ ಪರಿವರ್ತಿಸಲಾಗುವುದು. ಡಿಸೆಂಬರ್‌ನೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ನರೇಗಾದ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ.ಶಾಲೆಗಳಿಗೆ ಅನುಕೂಲ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಆಟದ ಮೈದಾನ, ಅಡುಗೆ ಕೋಣೆ, ಕಾಂಪೌಂಡ್ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಶಾಲೆಗಳಿಗೆ ಅನುಕೂಲವಾಗಲಿದೆ ಎಂದರು ತಾಪಂ ಇಒ ಕೆ.ಆರ್. ಪ್ರಕಾಶ್.