ಪ್ರತಿ ಗ್ರಾಮದಲ್ಲೂ ಗ್ಯಾರಂಟಿ ಯೋಜನೆ ಜಾಗೃತಿ: ಸಂಗನಗೌಡ ಪಾಟೀಲ

KannadaprabhaNewsNetwork |  
Published : Feb 14, 2026, 02:45 AM IST
12 ರೋಣ 1. ತಾಪಂ ಸಭಾಭವನದಲ್ಲಿ ಜರುಗಿದ  ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತ  ತಾಲೂಕ ಅಧ್ಯಕದಷ ಸಂಗನಗೌಡ( ಮಿಥುನ) .ಜಿ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿಸದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿರುವ ಫಲಾನುಭವಿಗಳ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ಅರ್ಹರಿಗೆ ತ್ವರಿತವಾಗಿ ಮಂಜೂರು ಮಾಡುವಂತೆ ಕ್ರಮವಹಿಸಬೇಕು.

ರೋಣ: ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಇನ್ನುಳಿದ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ತಲುಪುವಂತೆ ಮಾಡಲು ತಾಲೂಕು ಮಟ್ಟದಲ್ಲಿ ವಿಶೇಷ ಗಮನ ಹರಿಸಲಾಗಿದೆ. ಈ ಕುರಿತು ಪ್ರತಿಯೊಂದು ಗ್ರಾಮದಲ್ಲೂ ಜಾಥಾ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ತಾಲೂಕು ಗ್ಯಾರಂಟಿ‌ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗನಗೌಡ(ಮಿಥುನ) ಜಿ. ಪಾಟೀಲ ತಿಳಿಸಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಶುಕ್ರವಾರ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ‌ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು ಮನೆಮನೆಗೆ ತಲುಪಿದರೂ ಅವುಗಳ ಕುರಿತು ಸಮಗ್ರ ಜಾಗೃತಿ ಇನ್ನೂ ಅಗತ್ಯವಿದೆ ಎಂದರು.

ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣದ ದಿಟ್ಟ ಹೆಜ್ಜೆಯಾಗಿದೆ. ತಾಂತ್ರಿಕ ಕಾರಣಗಳಿಂದ ಯಾರೂ ವಂಚಿತರಾಗಬಾರದು. ಅರ್ಹರಿಗೆ ಸೌಲಭ್ಯ ತಲುಪಿಸುವಲ್ಲಿ ಮೊದಲ ಆದ್ಯತೆ‌ ನೀಡಲಾಗುವುದು. ಯೋಜನೆಯ ಪ್ರಸ್ತುತ ಸ್ಥಿತಿ, ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ, ಬಾಕಿ ಇರುವ ಪ್ರಕರಣಗಳ ಸಂಖ್ಯೆ, ಪಾವತಿಯಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆಗಳು ಹಾಗೂ ಡಿಬಿಟಿ ಸಂಬಂಧಿತ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಯಿತು.

ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿಸದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿರುವ ಫಲಾನುಭವಿಗಳ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ಅರ್ಹರಿಗೆ ತ್ವರಿತವಾಗಿ ಮಂಜೂರು ಮಾಡುವಂತೆ ಕ್ರಮವಹಿಸಬೇಕು ಎಂದು ಸೂಚಿಸಲಾಯಿತು ಎಂದರು.

ಸಭೆಯಲ್ಲಿದ್ದ ಕೆಲ ಸದಸ್ಯರು, ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾಹೀರಾತು ಅಂಟಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಯೋಜನೆಗಳ ವಿವರ ಹಾಗೂ ಜಾಹೀರಾತು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು. ಒಂದು ವಾರದೊಳಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ಯಾರಂಟಿ ಯೋಜನೆಗಳ ಜಾಹೀರಾತು ಪ್ರದರ್ಶಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ ಪ್ರಯುಕ್ತ ಫೆಬ್ರವರಿ 18ರಂದು ಜಿಲ್ಲೆಯ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ತಾಲೂಕಿನ ಎಲ್ಲ ಫಲಾನುಭವಿಗಳನ್ನು ಕರೆತರುವಂತೆ ಸೂಚನೆ ನೀಡಲಾಯಿತು.

ಸಭೆಯಲ್ಲಿ ಗಜೇಂದ್ರಗಡ ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ, ತಾಪಂ ವ್ಯವಸ್ಥಾಪಕ ದೇವರಾಜ್ ಸಜ್ಜನಶೆಟ್ಟರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಆಹಾರ ಇಲಾಖೆ ಪ್ರತಿನಿಧಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಂಗಾಪುರದಲ್ಲಿ ನೀರಿನ ಸಮಸ್ಯೆ: ಖಾಲಿ ಕೊಡ ಹಿಡಿದು ಪ್ರತಿಭಟನೆ
ಶುಖಮುನಿ ತಾತನ ಮಠಕ್ಕೆ ಸೇವೆಯ ಮಹಾಪೂರ