ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕರ್ನಾಟಕದಲ್ಲಿ ಸರಿ ಸುಮಾರು ಶೇ.98 ರಷ್ಟು ಜನರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನೇರವಾಗಿ ಉಪಯೋಗವಾಗುತ್ತಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾದ ಅವರು ಸೋಮವಾರ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ 10 ವರ್ಷ ಆಡಳಿತ ನಡೆಸಿದ ಬಿಜೆಪಿ ತಾವು ಮಾಡಿದ ಅಭಿವೃದ್ಧಿ ಅಥವಾ ಯಾವುದೇ ಸಾಧನೆ ಮುಂದಿಟ್ಟುಕೊಂಡು ಮತ ಕೇಳುತ್ತಿಲ್ಲ. ಕೇವಲ ಭಾವನಾತ್ಮಕ ವಿಚಾರಗಳು ರಾಷ್ಟ್ರ ಪ್ರೇಮಿಗಳು, ರಾಷ್ಟ್ರ ವಿರೋಧಿಗಳೆಂಬ ಹೇಳಿಕೆ ನೀಡುತ್ತಾ ಜನರ ದಿಕ್ಕು ತಪ್ಪಿಸಿ ಮತ ಯಾಚಿಸುತ್ತಿದ್ದಾರೆ ಎಂದು ಆರೋಪಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ಅಧಿಕಾರರೂಢ ಪಕ್ಷಕ್ಕಿರುವಷ್ಟೇ ಬಲ ಇರಬೇಕೆಂದು ಎಲ್ಲರೂ ಬಯಸುತ್ತಾರೆ ಆದರೆ 400 ಸ್ಥಾನ ಗೆಲ್ಲಬೇಕು, ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿರುವುದು ಸರ್ವಾಧಿಕಾರಿ ಪ್ರಭುತ್ವ ಪುನರ್ ಸ್ಥಾಪನೆ ಮಾಡುವ ಉದ್ದೇಶವಾಗಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರಂತರವಾಗಿ ದುರ್ಬಲ ಗೊಳಿಸುತ್ತಿದ್ದಾರೆ. ಕೆಲವರ ಮೂಲಕ ಸಂವಿಧಾನ ಬದಲಾವಣೆ ಹೇಳಿಕೆ ಕೊಡಿಸಿ ಚರ್ಚೆ ಹುಟ್ಟು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ಸಾಂವಿಧಾನಿಕ ಸಂಸ್ಥೆ ಐಟಿ, ಇಡಿ, ಸಿಬಿಐ ಯನ್ನು ವಿರೋಧ ಪಕ್ಷಗಳ ಮಟ್ಟ ಹಾಕಲು ಬಳಸಿಕೊಳ್ಳುತ್ತಿದ್ದು ಪ್ರಜಾ ಪ್ರಭುತ್ವ ವ್ಯವಸ್ಥೆ ಈ ಚುನಾವಣೆಯಲ್ಲಿ ಅಂತ್ಯವಾಗುತ್ತದೆಯೋ ಎಂಬ ಆತಂಕ ನಿರ್ಮಾಣವಾಗಿದೆ ಎಂದು ಹೇಳಿದರು.ಪ್ರಜಾಪ್ರಭುತ್ವ ಉಳಿಸಿ ಸಂವಿಧಾನ ರಕ್ಷಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸುತ್ತಿದ್ದು ಬಿಜೆಪಿ ಸಾಧನೆ ಬಗ್ಗೆ ಜನರ ಮುಂದಿಡಿ ಎಂಬುದಾಗಿ ಒತ್ತಾಯಿಸುತ್ತಿದ್ದೇವೆ. ಹಿಂದು ಹಿಂದುತ್ವ, ಏಕ ಸಮಾನ ನಾಗರಿಕ ಸಂಹಿತೆ, ಏಕ ಚುನಾವಣೆ, ರಾಮ ಮಂದಿರದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಆದರೆ ನಾವು ಕೂಡ ಹಿಂದೂಗಳೇ ಬುದ್ದ-ಬಸವ, ಅಂಬೇಡ್ಕರ್, ಗಾಂಧಿ ಹೇಳಿದಂತೆ ಹಿಂದುಗಳೆಂದು ಪ್ರತಿಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ಮಾಜಿ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಎಂ.ಎಲ್. ಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ವಕ್ತಾರ ರವೀಶ್ ಕ್ಯಾತನಬೀಡು, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜಿಲ್ಲಾ ವಕ್ತಾರ ರೂಬಿನ್ ಮೊಸಸ್ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 8 ಕೆಸಿಕೆಎಂ 6