ಗದಗ: ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತಂತೆ ಸೆಪ್ಟೆಂಬರ್ ಅಂತ್ಯದವರೆಗಿನ ಪ್ರಗತಿ ಪರಿಶೀಲನಾ ಸಭೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜರುಗಿತು.ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಡಿ ಜಿಲ್ಲೆಯಲ್ಲಿ ಉತ್ತಮ ಸಾಧನೆ ದಾಖಲಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಜಿಲ್ಲಾದ್ಯಂತ ಯೋಜನೆಗಳ ಅನುಷ್ಠಾನ ಶೇ. 99ರಷ್ಟು ಯಶಸ್ವಿಯಾಗಿ ನಡೆದಿದೆ ಎಂದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿ 2.57 ಲಕ್ಷ ಫಲಾನುಭವಿಗಳ ಪೈಕಿ ಶೇ. 99.3ರಷ್ಟು ಮಹಿಳೆಯರಿಗೆ ಪ್ರಯೋಜನ ತಲುಪಿದ್ದು, ₹986.42 ಕೋಟಿ ಮೊತ್ತ ಬಿಡುಗಡೆಗೊಂಡಿದೆ. ಅನ್ನಭಾಗ್ಯ ಯೋಜನೆ ಅಡಿ 2.34 ಲಕ್ಷ ಕುಟುಂಬಗಳಿಗೆ ಶೇ. 100ರಷ್ಟು ಅಕ್ಕಿ ವಿತರಣೆಯಾಗಿದ್ದು, ₹216.82 ಕೋಟಿಯ ಸಹಾಯ ಲಭಿಸಿದೆ.ಅದೇ ರೀತಿಯಲ್ಲಿ ಗೃಹಜ್ಯೋತಿ ಯೋಜನೆ ಅಡಿ 2.73 ಲಕ್ಷ ಮನೆಗಳಿಗೆ ಶೇ. 98.46 ರಷ್ಟು ಉಚಿತ ವಿದ್ಯುತ್ ಪ್ರಯೋಜನ ದೊರೆತಿದ್ದು, ₹247.24 ಕೋಟಿ ಮೊತ್ತ ಬಿಡುಗಡೆಗೊಂಡಿದೆ. ಯುವನಿಧಿ ಯೋಜನೆ ಅಡಿ 5,800 ಯುವಕರು ಶೇ. 100ರಷ್ಟು ಸಹಾಯವನ್ನು ಪಡೆದಿದ್ದು, ₹12.92 ಕೋಟಿಯ ನೆರವು ನೀಡಲಾಗಿದೆ. ಇದಲ್ಲದೆ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಶೇ. 100ರಷ್ಟು ಅನುಷ್ಠಾನಗೊಂಡಿದ್ದು, 404.12 ಕೋಟಿಯಷ್ಟು ಪ್ರಯೋಜನ ದೊರೆತಿದೆ.
ಪಂಚ ಗ್ಯಾರಂಟಿ ಯೋಜನೆಗಳ ಅಡಿ ಜಿಲ್ಲೆಯ ಜನರಿಗೆ ₹1867.52 ಕೋಟಿ ಹಣ ಪ್ರಯೋಜನ ತಲುಪಿದ್ದು, ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸಶಕ್ತಿಕರಣದತ್ತ ಜಿಲ್ಲೆ ದೃಢ ಹೆಜ್ಜೆ ಇಟ್ಟಿದೆ ಎಂದರು. ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಶಿಷ್ಟಾಚಾರದಂತೆ ಇಲಾಖಾಧಿಕಾರಿಗಳು ಆಹ್ವಾನಿಸಬೇಕು. ಈ ಕುರಿತು ಜಿಲ್ಲಾ ಪಂಚಾಯಿತಿಯಿಂದ ಸಂಬಂಧಿತ ಇಲಾಖೆಗಳಿಗೆ ಸರ್ಕಾರದ ಸುತ್ತೋಲೆ ತಲುಪಿಸಲು ಸೂಚಿಸಿದರು.ಸಭೆಗೆ ಹಾಜರಾಗದ ಅಧಿಕಾರಿಗಳ ಎಚ್ಚರಿಕೆ ನೀಡಿದ ಅವರು, ಜಿಲ್ಲೆಯ ಸಾರಿಗೆ ಬಸ್ ನಿಲ್ದಾಣಗಳ ಅವ್ಯವಸ್ಥೆ ಕುರಿತಂತೆ ಮಾತನಾಡಿದರು. ಸಭೆಯಲ್ಲಿ ನೀಲಮ್ಮ ಬೋಳನವರ, ಪಿ.ಬಿ. ಅಳಗವಾಡಿ, ದೀಪಕ ಲಮಾಣಿ, ಫಕ್ರುಸಾಬ ಚಿಕ್ಕಮಣ್ಣೂರ, ವಿವೇಕ ಯಾವಗಲ್, ಶರಣಪ್ಪ ಬೆಟಗೇರಿ, ಶಿವನಗೌಡ ಪಾಟೀಲ, ನಾಗರಾಜ ಮಡಿವಾಳರ, ದೇವಪ್ಪ ಮೋರನಾಳ, ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸೀಕಟ್ಟಿ, ವೀರಯ್ಯ ಮಠಪತಿ, ಆರ್.ಆರ್. ಗಡ್ಡದ್ದೇವರಮಠ ಸೇರಿದಂತೆ ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮಲ್ಲಿಕಾರ್ಜುನ ಚಳಗೇರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.