ಗದಗ: ರಾಜ್ಯದಲ್ಲಿಯೇ ಗದಗ ಜಿಲ್ಲೆಯು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ. 99.4ರಷ್ಟು ಗುರಿ ಸಾಧಿಸಿ ಪ್ರಥಮ ಸ್ಥಾನದಲ್ಲಿದೆ. ಈ ಸಾಧನೆಗೆ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಇಲಾಖಾಧಿಕಾರಿಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಯ ಸದಸ್ಯರು ಕಾರಣೀಭೂತರಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದಿಂದ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು, ಈ ಯೋಜನೆಗಳ ಅನುಷ್ಠಾನವು ಬಡಜನರ ಸೇವೆಗೆ ಒದಗಿಸಿದ ಬಹುದೊಡ್ಡ ಅವಕಾಶವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆ ಕುರಿತಂತೆ ಸವಿಸ್ತಾರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಇನ್ನೂ ಹೆಚ್ಚಿನ ಪ್ರಗತಿ ಸಾಧನೆಗೆ ಸೂಚನೆ ನೀಡಿದರು.ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸರ್ಕಾರದ ಸಭೆ ಸಮಾರಂಭಗಳು ಹಾಗೂ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಹಾಗೂ ಆಮಂತ್ರಣ ಪತ್ರಿಕೆ ಮುದ್ರಿಸುವಾಗ ಸಂಬಂಧಿತ ಅಧಿಕಾರಿಗಳು ಕಡ್ಡಾಯವಾಗಿ ಶಿಷ್ಟಾಚಾರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಮೂಲ ಸೌಕರ್ಯದೊಂದಿಗೆ ಮಹಿಳೆಯರಿಗೆ ಆಸನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಆರೋಗ್ಯಕರ ವಾತಾವರಣ ಕಾಪಾಡಲು ಸ್ವಚ್ಛತೆ ಪ್ರಮುಖ ಕಾರಣವಾಗಿರುವುದರಿಂದ ಎಲ್ಲ ಬಸ್ ನಿಲ್ದಾಣಗಳು ಸ್ವಚ್ಛವಾಗಿರುವಂತೆ ಕ್ರಮ ವಹಿಸಬೇಕು. ಗೃಹಜ್ಯೋತಿ ಯೋಜನೆ ಸೌಲಭ್ಯ ಅರ್ಹ ಎಲ್ಲ ಫಲಾನುಭವಿಗಳಿಗೆ ಒದಗುವಂತಾಗಬೇಕು. ಈ ನಿಟ್ಟಿನಲ್ಲಿ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪಿ.ಬಿ. ಅಳಗವಾಡಿ, ಹೇಮಂತಗೌಡ ಪಾಟೀಲ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಿತಿ ಸದಸ್ಯರು, ಅಧಿಕಾರಿಗಳು ಇದ್ದರು.