ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಶೇ. ೯೩ರಷ್ಟು ಫಲಾನುಭವಿಗಳಿಗೆ ತಲುಪಿದ್ದು, ಉಳಿದವರಿಗೂ ಅವುಗಳ ಅನುಕೂಲ ಕಲ್ಪಿಸಿಕೊಡಲು ಕಾರ್ಯ ಯೋಜನೆ ಹಮ್ಮಿಕೊಳ್ಳುವುದಾಗಿ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ ೪೧,೬೭೮ ಅರ್ಜಿಗಳ ಪೈಕಿ, ಇಲ್ಲಿಯವರೆಗೆ ೪೧,೫೬೯ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡಿದ್ದು, ಶೇ.೯೨.೯೪ರಷ್ಟು ಸಾಧನೆಯನ್ನು ಮಾಡಲಾಗಿದೆ. ಇನ್ನು ೧೦೯ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗದ ಕಾರಣ ಪೆಂಡಿಂಗ್ ಇದೆ. ಶೀಘ್ರದಲ್ಲಿ ಎಲ್ಲರಿಗೂ ಹಣ ವರ್ಗಾವಣೆಯಾಗುವಂತೆ ಕ್ರಮವಹಿಸುವುದಾಗಿ ತಿಳಿಸಿದರು.
ಶಕ್ತಿ ಯೋಜನೆಯಡಿ ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕಲ್ಲಿ ೧೧- ೬- ೨೩ ರಿಂದ ೩೧- ೦೧- ೨೦೨೫ ರವರೆಗೆ ೧,೬೭,೮೦,೯೩೪ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.ಅನ್ನಭಾಗ್ಯ ಯೋಜನೆಯಡಿ ಬಂಗಾರಪೇಟೆ ತಾಲೂಕಿನಲ್ಲಿ ಒಟ್ಟು ಪಡಿತರ ಚೀಟಿಗಳು ೪೫,೭೩೧ಗಳಿದ್ದು, ಅದರಲ್ಲಿ ಎಪಿಎಲ್ ೩೧೭೩ ಪಡಿತರ ಚೀಟಿ ಹೊಂದಿದ್ದಾರೆ. ಇನ್ನು ಉಳಿದ ೩೮೦೭೪ ಬಿಪಿಎಲ್ ಕಾರ್ಡುದಾರರಿಗೆ ಡಿ.ಬಿ.ಟಿ.ಮೂಲಕ ೨,೩೫,೧೦,೮೩೦ ರು.ಗಳನ್ನು ಸಂದಾಯ ಮಾಡಲಾಗಿದೆ.
ಯುವ ನಿಧಿ ಯೋಜನೆಯಲ್ಲಿ ಬಂಗಾರಪೇಟೆ ತಾಲೂಕಿನಲ್ಲಿ ಒಟ್ಟು ೪೯೮ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ೪೨೭ ಫಲಾನುಭವಿಗಳಿಗೆ ಡಿಬಿಟಿ ಮುಖಾಂತರ ಹಣ ವರ್ಗಾವಣೆ ಆಗಿದೆ. ಉಳಿದ ೫೨ ಫಲಾನುಭವಿಗಳ ಬ್ಯಾಂಕ್ ಖಾತೆಗಳಲ್ಲಿ ದೋಷವಿರುವ ಕಾರಣ ವರ್ಗಾವಣೆ ಆಗಿಲ್ಲ, ಮುಂದಿನ ದಿನಗಳಲ್ಲಿ ವರ್ಗಾವಣೆ ಮಾಡಲಾಗುವುದು ಎಂದರು.ಗ್ಯಾರಂಟಿ ಯೋಜನೆಯ ಸಮಿತಿ ಉಪಾಧ್ಯಕ್ಷ ಸೈಯದ್ ರಫೀಕ್ ಉಲ್ಲಾ, ಸದಸ್ಯರಾದ ವಿವೇಕಾನಂದ, ಮಂಜುನಾಥ್, ಬೀರಪ್ಪ, ನಾರಾಯಣಸ್ವಾಮಿ, ಶಂಕರಪ್ಪ, ತಾಪಂ ಇಒ ರವಿಕುಮಾರ್, ಸಿಡಿಪಿಒ ಮುನಿರಾಜು, ಬೆಸ್ಕಾಂ ಎಇಇ ರಾಜು ಇದ್ದರು.