ಕನ್ನಡಪ್ರಭ ವಾರ್ತೆ ಹಾಸನ
ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಹಾಸನ ಜಿಲ್ಲೆಗೆ ಇದುವರೆಗೆ ೩,೧೦೫.೭೮ ಕೋಟಿ ರು. ಹಣ ಬಿಡುಗಡೆ ಆಗಿದ್ದು, ಹಾಸನ ಜಿಲ್ಲೆಯಲ್ಲಿ ಶೇ.೯೯.೫ರಷ್ಟು ಅನುಷ್ಠಾನಗೊಂಡಿರುವುದು ಶ್ಲಾಘನೀಯ ಎಂದು ಶಾಸಕರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಹೇಳಿದ್ದಾರೆ.ಜಿಲ್ಲಾ ಪಂಚಾಯತ್‌ನಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲಾ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬುವುದರ ಜೊತೆಗೆ ರಾಜ್ಯದ ಆರ್ಥಿಕ ಪುನಶ್ಚೇತನಕ್ಕೂ ಸಹಕಾರಿಯಾಗಿವೆ ಎಂದರಲ್ಲದೆ ತಲಾ ಆದಾಯ ಕೂಡಾ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿರುವ ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ ಪಂಚಗ್ಯಾರಂಟಿ ಯೋಜನೆಯಾಗಿದ್ದು, ವಿರೋಧಿಸುವವರು ಬೆರಳೆಣಿಕೆಯಷ್ಟು, ಆದರೆ ಸ್ವಾಗತಿಸಿ ಆಶೀರ್ವದಿಸುತ್ತಿರುವವರು ಲಕ್ಷಾಂತರ ಮಂದಿ ಎಂದರು.ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮಾತನಾಡಿ, ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ಹಾಸನ ಜಿಲ್ಲೆಗೆ ನೀಡಿದ್ದಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಅವರನ್ನು ಅಭಿನಂದಿಸಿದರು.
ದೇವರ ದರ್ಶನ:ಶಕ್ತಿ ಯೋಜನೆಯಿಂದ ಗ್ರಾಮೀಣ ಜನತೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಲು ಸಹಕಾರಿಯಾಗಿದೆ. ಕಳೆದ ಬಾರಿ ಹಾಸನಾಂಬೆ ದರ್ಶನಕ್ಕೆ ಬೀದರ್‌ನಿಂದ ಚಾಮರಾಜನಗರದವರೆಗೆ ಮಹಿಳೆಯರು ಶಕ್ತಿ ಯೋಜನೆ ಮೂಲಕ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರುವುದಾಗಿ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಹೇಳಿದರು.ಸಾಲದ ಹಣ ಕಡಿತ ಇಲ್ಲ:
ಗೃಹಲಕ್ಷ್ಮೀ ಹಣವನ್ನು ಸಾಲದ ಕಂತುಗಳಿಗೆ ಬ್ಯಾಂಕುಗಳು ಕಡಿತ ಮಾಡಿಕೊಳ್ಳುತ್ತಿಲ್ಲ. ಒಂದು ವೇಳೆ ಕಡಿತ ಆದರೂ ಎರಡು ಮೂರು ದಿನದಲ್ಲಿ ಆ ಹಣ ಖಾತೆಗೆ ವಾಪಸ್ ಆಗುತ್ತಿದೆ. ಈ ಬಗ್ಗೆ ಫಲಾನುಭವಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸಭೆಗೆ ಮಾಹಿತಿ ನೀಡಿದರು.ಪಂಚ ಗ್ಯಾರಂಟಿಗಳ ಪ್ರಗತಿ:
ಗೃಹಲಕ್ಷ್ಮೀ: ಯೋಜನೆಯಡಿ ಜಿಲ್ಲೆಯಲ್ಲಿ ೪,೨೭,೨೬೯ ಫಲಾನುಭವಿಗಳಿದ್ದಾರೆ. ೨೦೨೩ರಿಂದ ಜೂನ್ ವರೆಗೆ ೧೭೮೩ ಕೋಟಿ ರು. ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದು, ಶೇ.೯೯.೫ ರಷ್ಟು ಮಂದಿಗೆ ಯೋಜನೆ ತಲುಪಿದೆ. ಜಿಲ್ಲೆಯಲ್ಲಿ ೪,೨೦೧ ಮಂದಿ ಫಲಾನುಭವಿಗಳು ಮರಣ ಹೊಂದಿದ್ದಾರೆ. ಹೀಗಾಗಿ ಮರಣ ಹೊಂದಿರುವವರ ಪಟ್ಟಿ ಕ್ರೋಢೀಕರಿಸಿ ರಾಜ್ಯ ಮತ್ತು ಜಿಲ್ಲಾ ಸಮಿತಿಗೆ ಪ್ರತಿ ತಿಂಗಳು ನೀಡಬೇಕು ಎಂದು ದಿನೇಶ್ ಗೂಳಿಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.ಗೃಹಜ್ಯೋತಿ: ಯೋಜನೆಯಡಿ ೫,೩೫,೯೮೯ ಗ್ರಾಹಕರು ನೋಂದಣಿಯಾಗಿದ್ದು ೧೯,೭೮,೬೭೯೩ ಯುನಿಟ್ ಉಚಿತ ವಿದ್ಯುತ್ ಬಳಕೆ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರ ೪೧೫ ಕೋಟಿ ರು. ಸಬ್ಸಿಡಿ ಹಣವನ್ನು ಪಾವತಿ ಮಾಡಲಾಗಿದ್ದು ಶೇ ೧೦೦ರಷ್ಟು ಪ್ರಗತಿ ಸಾಧಿಸಲಾಗಿದೆ.
ಶಕ್ತಿ ಯೋಜನೆ: ಜಿಲ್ಲೆಯಲ್ಲಿ ಸರಾಸರಿ ೨ ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು, ೪೮೫ ಕೋಟಿ ರು. ಟಿಕೆಟ್ ಹಣವನ್ನು ನಿಗಮಕ್ಕೆ ಸರ್ಕಾರ ಪಾವತಿ ಮಾಡಿದೆ.ಅನ್ನಭಾಗ್ಯ: ಯೋಜನೆಯಡಿ ಜಿಲ್ಲೆಯಲ್ಲಿ ೪,೨೯,೦೨೩ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ೪೦೭.೦೫ ಕೋಟಿ ರು. ಹಣವನ್ನು ವರ್ಗಾಯಿಸಲಾಗಿದೆ. ಫೆಬ್ರವರಿಯಿಂದ ೧೭೦ ರು. ಹಣದ ಬದಲಿಗೆ ಐದು ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಶೇ. ೮೪ರಷ್ಟು ಬಿಪಿಎಲ್ ಕಾರ್ಡ್‌ದಾರರಿದ್ದು ಎಲ್ಲರಿಗೂ ಸಮರ್ಪಕವಾಗಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ.
ಯುವನಿಧಿ: ಯೋಜನೆಗೆ ಸಂಬಂಧಿಸಿದಂತೆ ೬೩೬೭ ಫಲಾನುಭವಿಗಳಿಗೆ ೧೫.೭೮ ಕೋಟಿ ರು. ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ. ಕಾಲೇಜುಗಳಲ್ಲಿ ಯೋಜನೆ ಕುರಿತು ಪ್ರಚಾರ ಮಾಡಿ ನೋಂದಣಿ ಅಭಿಯಾನ ನಡೆಸಲಾಗುತ್ತಿದೆ.ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ತಾಲೂಕು ಅಧ್ಯಕ್ಷ ಎಚ್.ಪಿ.ಶ್ರೀಧರ್ ಗೌಡ, ಧರ್ಮಶೇಖರ, ಆನಂದಮೂರ್ತಿ ಜೆ.ಬಿ., ಶಿವಕುಮಾರ್, ಸದಸ್ಯರಾದ ಕಮಲಮ್ಮ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಬಿ.ಆರ್., ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೃಷ್ಣಮೂರ್ತಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಉಪಸ್ಥಿತರಿದ್ದರು.