ಎಲ್ಲ ವರ್ಗಗಳನ್ನೂ ತಲುಪಿದ ಗ್ಯಾರಂಟಿ ಯೋಜನೆ: ಐವಾನ್‌ ಡಿಸೋಜಾ

KannadaprabhaNewsNetwork | Published : Apr 13, 2024 1:00 AM

ಸಾರಾಂಶ

ಬಿಜೆಪಿಯಲ್ಲಿ ಕಳೆದ ಅನೇಕ ದಿನಗಳಿಂದ ಕಾರ್ಯಕರ್ತರಿಗೆ ಉಂಟಾಗಿದ್ದ ಉಸಿರು ಕಟ್ಟುವ ವಾತಾವರಣವನ್ನು ಪ್ರತಿಭಟಿಸಿ ಇದೀಗ ಕಾಂಗ್ರೆಸ್ ಸೇರಿ, ನೆಮ್ಮದಿ ಹೊಂದುವಂತಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ತಿಳಿಸಿದರು.

ಯಲ್ಲಾಪುರ: ಚುನಾವಣೆಗೂ ಮುನ್ನ ಘೋಷಿಸಿದಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲವನ್ನು ಯಾವುದೇ ವರ್ಗಕ್ಕೆ ಸೀಮಿತಗೊಳಿಸದೇ ಪ್ರತಿಯೊಬ್ಬರಿಗೂ ಉಚಿತವಾಗಿ ತಲುಪಿಸುತ್ತಿದೆ ಎಂದು ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ತಿಳಿಸಿದರು.

ಶುಕ್ರವಾರ ಪಟ್ಟಣದ ಅಡಿಕೆ ಭವನದಲ್ಲಿ ತಾಲೂಕು ಕಾಂಗ್ರೆಸ್ ಘಟಕ ಏರ್ಪಡಿಸಿದ್ದ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಕಾಂಗ್ರೆಸ್ ಸೇರ್ಪಡೆ ಕೇವಲ ತಾಲೂಕಿಗೊಂದೇ ಸೀಮಿತವಾಗಿರದೇ, ಪಕ್ಷಕ್ಕೆ ಬಿಜೆಪಿಯಿಂದ ಸೇರ್ಪಡೆಗೊಂಡ ಕಾರ್ಯಕರ್ತರು ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದಂತಾಗಿದ್ದು, ಸಮಾಜ ಸೇವೆಗಾಗಿ ಉತ್ತಮ ಅವಕಾಶ ಪಡೆದಂತಾಗಿದೆ ಎಂದರು.

ಬಿಜೆಪಿಯಲ್ಲಿ ಕಳೆದ ಅನೇಕ ದಿನಗಳಿಂದ ಕಾರ್ಯಕರ್ತರಿಗೆ ಉಂಟಾಗಿದ್ದ ಉಸಿರು ಕಟ್ಟುವ ವಾತಾವರಣವನ್ನು ಪ್ರತಿಭಟಿಸಿ ಇದೀಗ ಕಾಂಗ್ರೆಸ್ ಸೇರಿ, ನೆಮ್ಮದಿ ಹೊಂದುವಂತಾಗಿದೆ. ಕಾಂಗ್ರೆಸ್ ಎಂದಿನಿಂದಲೂ ಜನಸಾಮಾನ್ಯರ ಪಕ್ಷವಾಗಿದ್ದು, ನೀತಿ ಮತ್ತು ಸಿದ್ಧಾಂತಗಳನ್ನು ವಾಸ್ತವಿಕವಾಗಿ ನಂಬಿದೆ. ಆದರೆ, ಎಲ್ಲವನ್ನೂ ಭಾಷಣದಲ್ಲಿ ಹೇಳುವ ಬಿಜೆಪಿಯ ಉನ್ನತ ಹುದ್ದೆಗಳಲ್ಲಿ ಒಬ್ಬರಾದರೂ ಕ್ರಿಶ್ಚಿಯನ್, ಮುಸ್ಲಿಂ ಅಥವಾ ಸಿಖ್ ಸಮುದಾಯದವರು ಇದ್ದಾರೆಯೇ ಎಂದು ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವ್ಕರ ಮಾತನಾಡಿ, ಮುಂಡಗೋಡ ಮತ್ತು ಬನವಾಸಿಗಳಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ವಿವೇಕ ಹೆಬ್ಬಾರ ನೇತೃತ್ವದಲ್ಲಿ ಇಂದಿನ ಸಭೆಯಲ್ಲಿ ಬಿಜೆಪಿಯ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದು, ಇದೀಗ ಕಾಂಗ್ರೆಸ್ ಸಶಕ್ತಗೊಂಡಿದೆ ಎಂದರು.

ಪಕ್ಷದ ಜಿಲ್ಲಾ ಉಸ್ತುವಾರಿ ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಹಿಂದೆ ಜೆಡಿಎಸ್‌ನೊಂದಿಗೆ ಮಾಡಿಕೊಂಡಿದ್ದ ಹೊಂದಾಣಿಕೆಯನ್ನು ವಿರೋಧಿಸಿದವರೇ ಅವರೊಡನೆ ಪುನಃ ಹೊಂದಾಣಿಕೆ ಮಾಡಿಕೊಂಡಿರುವುದು ವಿಪರ್ಯಾಸವಾಗಿದೆ. ಬದಲಾದ ಸನ್ನಿವೇಶದಲ್ಲಿ ಮನಃಸ್ತಾಪಗಳ ವಿರೋಧವನ್ನು ತೊರೆದು, ಪುನಃ ಕಾಂಗ್ರೆಸ್‌ ಸೇರುತ್ತಿರುವುದು ಪಕ್ಷಕ್ಕೆ ಆನೆಬಲ ನೀಡಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ಪಕ್ಷಗಳಲ್ಲಿ ಮೂಡಿದ್ದ ಅನೇಕ ಸಮಸ್ಯೆಗಳು ಬಗೆಹರಿದಿದ್ದು, ಭಿನ್ನಮತ ಶಮನವಾಗಿದೆ. ಈ ನಡುವೆಯೂ ಮತದಾರರಲ್ಲಿ ಚುನಾವಣೆ ಕುರಿತಾಗಿ ನಕಾರಾತ್ಮಕ ಚಿಂತನೆಗಳು ಕಂಡುಬರುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಬಿಜೆಪಿಯವರು ತಮ್ಮ ಪ್ರಚಾರದಲ್ಲಿ ಮೋದಿ ನಾಯಕತ್ವವೇ ಬೇಕೆನ್ನುವ ರೀತಿ ದೇಶದ ದುರಂತವಾಗಿದೆ ಎಂದರು.

ತಾಲೂಕಿನ ೧೫ ಗ್ರಾಪಂ ಮತ್ತು ಪಪಂ ವ್ಯಾಪ್ತಿಯ ಸಾವಿರಾರು ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆಯ ನೇತೃತ್ವ ವಹಿಸಿದ್ದ ಯುವ ನಾಯಕ ವಿವೇಕ ಹೆಬ್ಬಾರ ಮಾತನಾಡಿ, ನಿನ್ನೆಯ(ಗುರುವಾರ) ಕಾರ್ಯಕ್ರಮದ ಮುಂದುವರಿದ ಭಾಗವಾಗಿ ನಡೆದ ಇಂದಿನ ಸಭೆಯಲ್ಲಿ ನಿರೀಕ್ಷೆಗೂ ಮೀರಿದ ಜನಸ್ಪಂದನ ರೋಮಾಂಚನ ಮೂಡಿಸಿದೆ. ರಾಜಕೀಯದಲ್ಲಿ ಇರಬಹುದಾದ ಪರಸ್ಪರ ವಿರೋಧಾಭಾಸ, ವೈಷಮ್ಯ ಮತ್ತಿತರ ವೈರುಧ್ಯಗಳನ್ನು ಮರೆತು, ನಾವು ಮರಳಿ ಗೂಡಿಗೆ ಸೇರುತ್ತಿದ್ದೇವೆ ಎಂದರು.

ರಾಘವೇಂದ್ರ ಭಟ್ಟ ಹಾಸಣಗಿ, ಪ್ರಕಾಶ ಹೆಗಡೆ, ಮಾಜಿ ತಾಲೂಕಾಧ್ಯಕ್ಷ ಡಿ.ಎನ್. ಗಾಂವ್ಕರ, ತಾಲೂಕು ಪ್ರಧಾನ ಕಾರ್ಯದರ್ಶಿ ಅನಿಲ ಮರಾಠೆ, ಪ್ರಮುಖರಾದ ರವಿ ಭಟ್ಟ ಬರಗದ್ದೆ, ಶಿರೀಷ್ ಪ್ರಭು, ವಿ.ಎಸ್. ಭಟ್ಟ, ನರಸಿಂಹ ನಾಯ್ಕ, ಗಣೇಶ ರೋಖಡೆ ಮತ್ತಿತರರು ವೇದಿಕೆಯಲ್ಲಿದ್ದರು

ತಾಲೂಕಾಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ ಸ್ವಾಗತಿಸಿದರು. ಆರ್.ಬಿ. ಹೆಗಡೆ ನಿರ್ವಹಿಸಿದರು. ಪಪಂ ಮಾಜಿ ಅಧ್ಯಕ್ಷ ಶಿರೀಷ್ ಪ್ರಭು, ಪಪಂ ನಿಕಟಪೂರ್ವ ಅಧ್ಯಕ್ಷೆ ಸುನಂದಾ ದಾಸ, ಸದಸ್ಯರಾದ ಸತೀಶ ನಾಯ್ಕ, ನಾಗರಾಜ ಅಂಕೋಲೆಕರ, ಪ್ರಶಾಂತ ತಳವಾರ, ಪುಷ್ಪಾ ನಾಯ್ಕ, ಅಲಿ, ಹಲೀಮಾ ಶೇಖ್, ಅಮಿತ್ ಅಂಗಡಿ, ಜನಾರ್ದನ ಪಾಟಣಕರ, ಪ್ರಮುಖರಾದ ಮುರಳಿ ಹೆಗಡೆ, ನರಸಿಂಹ ಭಟ್ಟ ಬೋಳ್ಪಾಲ, ಗಣಪತಿ ಗೌಡ ಬಿಸಗೋಡ, ಈಶ್ವರ ಗಾಂವ್ಕರ ಕಂಚೀಮನೆ, ಗೋಪಾಲಕೃಷ್ಣ ಭಟ್ಟ ಕೈಶೆಟ್ಟಿಮನೆ, ರಾಮಚಂದ್ರ ಗಾಂವ್ಕರ ದೊಣಿಗದ್ದೆ, ವೆಂಕಟರಮಣ ಭಟ್ಟ ತಟಗಾರ, ಆರ್.ಜಿ. ಭಟ್ಟ ಮೇಗನಮನೆ, ಜಿ.ಎಸ್. ಭಟ್ಟ ಬರಗದ್ದೆ, ವಿಶ್ವೇಶ್ವರ ಭಟ್ಟ ಕಾರೆಮನೆ, ಗಣಪತಿ ಗೌಡ ಗೇರಾಳ ಸೇರಿದಂತೆ ಅನೇಕರು ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆಗೊಂಡರು. ತಾಲೂಕಿನ ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಅಲ್ಲದೇ, ವಿವಿಧ ಸಾಮಾಜಿಕ ಪ್ರಮುಖರು ಸೇರ್ಪಡೆಗೊಂಡರು.

Share this article