ಕೊಪ್ಪಳ:
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಆ ಕುರಿತು ಯಾವುದೇ ಗೊಂದಲ ಬೇಡವೆಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ರಸ್ತೆ ಬೇಕೆಂದರೆ ಗ್ಯಾರಂಟಿ ಯೋಜನೆ ಬಂದ್ ಮಾಡಲಾಗುವುದು ಎಂದು ಶನಿವಾರ ನೀಡಿದ್ದ ಹೇಳಿಕೆಗೆ ಭಾನುವಾರ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಯಾವುದೇ ರೀತಿಯ ಹಣದ ಕೊರತೆ ಉಂಟಾಗಿಲ್ಲ. ಗ್ಯಾರಂಟಿ ಯೋಜನೆಯಿಂದ ಜನರಿಗೆ ₹ 52 ಸಾವಿರ ಕೋಟಿ ನೀಡುತ್ತೇವೆ. ಜತೆಗೆ ಜನರಿಗೆ ಸಬ್ಸಿಡಿಯಾಗಿ ಸಹ ಇನ್ನೂ ₹ 50 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದರು.
ತಪ್ಪಾದ ಅರ್ಥ ಬೇಡ:ಗ್ಯಾರಂಟಿ ಯೋಜನೆಯಲ್ಲಿ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಹಳ್ಳಿಯಲ್ಲಿ ಸಾಮಾನ್ಯವಾಗಿ ಮಾತನಾಡುವ ಸಂದರ್ಭದಲ್ಲಿ ಒಂದೇ ವರ್ಷ ಎಲ್ಲ ಕೆಲಸ ಮಾಡಬೇಕು ಎಂದರೆ ಹೇಂಗಪ್ಪಾ, ಮುಂದಿನ ವರ್ಷ ಗ್ರಾಮೀಣ ರಸ್ತೆಗಳನ್ನು ಮಾಡಿಕೊಡುತ್ತೇನೆ ಎಂದು ಹೇಳಿದ್ದೇನೆ ಎಂದ ಅವರು, ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತಗೊಂಡಿಲ್ಲ. ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಿವೆ. ಗ್ಯಾರಂಟಿ ಯೋಜನೆ ನಿಲ್ಲುತ್ತವೆ ಎಂದು ವ್ಯತಿರಿಕ್ತ ಹೇಳಿಕೆ ನೀಡಿಲ್ಲ ಎಂದು ತಿಳಿಸಿದರು.ರೈತರ ಪಂಪ್‌ಸೆಟ್‌ಗೆ ವಿದ್ಯುತ್, ಹಾಲಿನ ಪ್ರೋತ್ಸಾಹಧನ, ವೃದ್ಧಾಪ್ಯ ವೇತನ, ಮಾಸಾಶನ, ಗರ್ಭಿಣಿಯರಿಗೆ ಭತ್ಯೆ ಹಾಗೂ ಇತರೆ ಯೋಜನೆಗೆ ಹಣ ನೀಡುತ್ತೇವೆ. ಗ್ಯಾರಂಟಿ ಹಾಗೂ ಜನರಿಗೆ ನೀಡುವ ಸಬ್ಸಿಡಿ ವರ್ಷಕ್ಕೆ ₹ 1.2 ಲಕ್ಷ ಕೋಟಿ ನೀಡುತ್ತಿದ್ದೇವೆ. ಇದರ ಜತೆಗೆ ಅಭಿವೃದ್ಧಿಗೂ ಸಾಕಷ್ಟು ಹಣ ನೀಡಿದ್ದೇವೆ ಎಂದ ಅವರು, ಅಭಿವೃದ್ಧಿಗೆ ಮುಖ್ಯಮಂತ್ರಿ ಸಾಕಷ್ಟು ಅನುದಾನ ನೀಡಿದ್ದಾರೆಂದರು.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ:ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯೇ ಪ್ರಶ್ನೆಯೇ ಇಲ್ಲ. ಜನಪರ ಯೋಜನೆ ನೀಡುತ್ತಿರುವ, ಉತ್ತಮ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬಿಜೆಪಿಯವರು ಎಷ್ಟೇ ಹೇಳಿದರೂ ಸಿಎಂ ಸ್ಥಾನದಲ್ಲಿ ಬದಲಾವಣೆ ಆಗುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರು ಪಕ್ಷದ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದು ಡಿಮೋಷನ್ ಆಗುವುದಿಲ್ಲ. ರಾಷ್ಟ್ರದಲ್ಲಿಯೇ ಸಿದ್ದರಾಮಯ್ಯ ಅವರು ಪಾಪ್ಯುಲರ್ ಸಿಎಂ ಆಗಿದ್ದು ಕಾಂಗ್ರೆಸ್‌ನಲ್ಲಿ ಮಾಸ್ ಲೀಡರ್ ಆಗಿದ್ದಾರೆ ಎಂದ ಅವರು, ಸುರ್ಜೆವಾಲಾ ಅವರು ಸಾಮಾನ್ಯವಾಗಿ ಪಕ್ಷದ ಸಂಘಟನೆ, ಕ್ಷೇತ್ರದ ಅಭಿವೃದ್ಧಿ, ಸಮಸ್ಯೆ ಆಲಿಸಲು ರಾಜ್ಯಕ್ಕೆ ಬರುತ್ತಾರೆ. ಸಿಎಂ ಸ್ಥಾನದ ಬದಲಾವಣೆಗೆ ಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.ಸಂಪುಟ ಪುನರ್ ರಚನೆ ವೇಳೆ ನೀವು ಹಣಕಾಸು ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ, ಮಂತ್ರಿ ಆದರೆ ಸಾಕಾಗೈತಿ. ನಂಗೆ ಪ್ರಧಾನಿ ಆಗಬೇಕು ಅನ್ನೋ ಆಸೆನೂ ಇದೆ. ಮುಂದೇ ನೋಡೋಣವೆಂದು ನಡೆದರು.