ಹುಬ್ಬಳ್ಳಿ: ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಮೀಸಲಾತಿಗಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದವರ ಮೇಲೆ ಲಾಠಿ ಪ್ರಹಾರ ನಡೆದಿತ್ತು. ಹೈಕೋರ್ಟ್ ನ್ಯಾಯಾಧೀಶರು ಪ್ರಕರಣದ ಕುರಿತು ಕೇಳಿದ್ದ ವರದಿ ನೀಡುವ ಅವಧಿ ಮೀರಿದ್ದು, ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆ ಎಸಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಕುರಿತಂತೆ ವರದಿ ನೀಡುವಂತೆ ಸರ್ಕಾರಕ್ಕೆ ಮೂರು ತಿಂಗಳು ಗಡುವು ನೀಡಿದ್ದರೂ ಇನ್ನೂ ವರದಿ ಸಲ್ಲಿಸಿಲ್ಲ. ಜು. 4ಕ್ಕೆ ಗಡುವು ಮುಕ್ತಾಯವಾಗಿದ್ದು, ಸರ್ಕಾರ ನ್ಯಾಯಾಂಗ ನಿಂದನೆಗೆ ಒಳಗಾಗಿದೆ. ಸಂಬಂಧಿಸಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕೋರ್ಟ್ ಮೆಟ್ಟಿಲು ಹತ್ತುತ್ತೇವೆ ಎಂದು ಹೇಳಿದರು.2ಎ ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ ಸಮಾಜ ಬಹು ವರ್ಷಗಳಿಂದ ಹೋರಾಟ ಮಾಡುತ್ತಿದೆ. ಪ್ರಥಮ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಲೇ ಬಂದಿದೆ. ಬೆಂಗಳೂರಿನಲ್ಲಿ ಮೀಸಲಾತಿ ಆಗ್ರಹಿಸಿ 10 ಲಕ್ಷ ಜನರನ್ನು ಸೇರಿಸಿ ಸ್ವಾಮೀಜಿ ಬೃಹತ್ ಸಮಾವೇಶ ಮಾಡಿದರು. ಈ ಹಿನ್ನೆಲೆಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕ್ಯಾಟಗೇರಿ 2ಎ ಬದಲು 2ಸಿ, 2ಡಿ ಮೀಸಲಾತಿ ಮಾಡಿತ್ತು. ಶೇ.5 ಇದ್ದ ಮೀಸಲಾತಿಯನ್ನು ಶೇ. 7ಕ್ಕೆ ಏರಿಕೆ ಮಾಡಿ ಲಿಂಗಾಯತ, ಮರಾಠ ಸಮಾಜಕ್ಕೆ ಬಿಜೆಪಿ ಸರ್ಕಾರ ಅನುಕೂಲ ಮಾಡಿತ್ತು. ಶೇ.4 ಇದ್ದ ಒಕ್ಕಲಿಗ ಮೀಸಲಾತಿಯನ್ನು ಶೇ. 6 ಏರಿಕೆ ಮಾಡಿ ಐತಿಹಾಸಿಕ ನಿರ್ಧಾರ ಬೊಮ್ಮಾಯಿ ಮಾಡಿದ್ದರು. ಆದರೆ, ಇದನ್ನು ಕಾರ್ಯ ರೂಪಕ್ಕೆ ತರುವುದಕ್ಕೂ ಸರ್ಕಾರ ಮುಂದಾಗುತ್ತಿಲ್ಲ. ಅಂದು ಚುನಾವಣೆ ಕಾರಣಕ್ಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಆಪ್ತರೊಬ್ಬರು ಕೋರ್ಟ್ ಹೋಗಿ ಬೊಮ್ಮಾಯಿ ಅವರು ತೆಗೆದುಕೊಂಡ ನಿರ್ಧಾರಕ್ಕೆ ತಡೆ ತಂದಿದ್ದರು. ಆದರೀಗ ಚುನಾವಣೆ ಮುಗಿದು ಎರಡು ವರ್ಷ ಆಗಿದೆ. ನ್ಯಾಯಾಲಯದಲ್ಲಿ ಇದರ ಪರ ವಕಾಲತ್ತು ಸರ್ಕಾರ ವಹಿಸುತ್ತಿಲ್ಲ. ಪಂಚಮಸಾಲಿ ಮೀಸಲಾತಿ ಬೇಡಿಕೆಯ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲ ಎಂದು ಕಿಡಿಕಾರಿದರು.
ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, 9 ರಾಜ್ಯಗಳಲ್ಲಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ. ಈ ಕುರಿತಂತೆ ಕೇಂದ್ರದ ನಮ್ಮ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ನಮ್ಮಲ್ಲಿ ಕುಟುಂಬ ಮತ್ತು ಒಂದೇ ಸಮಾಜದವರ ರಾಜಕಾರಣವಿಲ್ಲ. ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಮಾಡುತ್ತಾರೋ ಏನೋ ಯಾರಿಗೆ ಗೊತ್ತು ಎಂದರು.ಮೂಲಭೂತ ಸೌಲಭ್ಯಗಳು ಬೇಕಾದರೆ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಹೇಳಿರುವುದು ಸರಿಯಾಗಿಯೇ ಇದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ, ಅವರು ಹಾಗೇ ಹೇಳಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ನಾನು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ, ಸರ್ಕಾರ ನಡೆಸುತ್ತಿರುವವರೇ ಲೂಟಿ ಹೊಡೆಯುತ್ತಿದ್ದಾರೆ, ಅದು ನಿಲ್ಲಬೇಕು. ಲೂಟಿ ಹೊಡೆಯುವುದು ನಿಂತರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.