ಗ್ಯಾರಂಟಿ ಯೋಜನೆಯಿಂದ ರಾಜ್ಯಕ್ಕೆ ಆರ್ಥಿಕ ಶಕ್ತಿ: ಮಲ್ಲೇಶ್‌

KannadaprabhaNewsNetwork |  
Published : Dec 17, 2025, 01:15 AM IST
ಚಿಕ್ಕಮಗಳೂರು ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶ್‌ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಉಪಾಧ್ಯಕ್ಷ ಅನ್ಸರ್‌ ಆಲಿ, ಇಓ ವಿಜಯಕುಮಾರ್‌ ಇದ್ದರು. | Kannada Prabha

ಸಾರಾಂಶ

ತಾಲೂಕಿನ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಒಟ್ಟು 600 ಕೋಟಿ ರುಪಾಯಿಗಳನ್ನು ವ್ಯಯಿಸುವ ಮೂಲಕ ಆರ್ಥಿಕ ಶಕ್ತಿ ತುಂಬುತ್ತಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ತಾಲೂಕಿನ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಒಟ್ಟು 600 ಕೋಟಿ ರುಪಾಯಿಗಳನ್ನು ವ್ಯಯಿಸುವ ಮೂಲಕ ಆರ್ಥಿಕ ಶಕ್ತಿ ತುಂಬುತ್ತಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಹೇಳಿದರು.

ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 69,762 ಕುಟುಂಬದ ಯಜಮಾನಿಯ ಫಲಾನುಭವಿಗಳಿಗೆ ಎರಡು ಸಾವಿರದಂತೆ 23 ಕಂತುಗಳಿಂದ 12.95 ಕೋಟಿ ರು.ಗಳನ್ನು ಮಧ್ಯವರ್ತಿಗಳ ಹಾವಳಿಗಳಿಲ್ಲದೇ ನೇರವಾಗಿ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯಡಿ ಚಿಕ್ಕಮಗಳೂರು ಡಿಪೋ ಬಸ್‌ಗಳಲ್ಲಿ 2.74 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಇದಕ್ಕೆ ಸರ್ಕಾರ 97 ಕೋಟಿ ರು. ಸಾರಿಗೆ ಇಲಾಖೆಗೆ ಭರಿಸಸಲಾಗಿದೆ. ಶಕ್ತಿ ಯೋಜನೆಯನ್ನು ಇನ್ನಷ್ಟು ಬಲಗೊಳಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಕಳೆದ ಫೆಬ್ರವರಿ ಮಾಹೆಯಿಂದ ಹಣದ ಬದಲಾಗಿ ಹೆಚ್ಚುವರಿ ಅಕ್ಕಿಯನ್ನು ವಿತರಿಸಲಾಗುತ್ತಿದ್ದು ಮುಂದಿನ ದಿನದಲ್ಲಿ ನ್ಯಾಯ ಬೆಲೆ ಅಂಗಡಿಗಳಿಂದ ಇಂದಿರಾ ಕಿಟ್ ವಿತರಿಸುವ ಮೂಲಕ ಪಡಿತರದಾರರಿಗೆ ಅನುಕೂಲವಾಗಲು ಯೋಜನೆ ರೂಪಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.

ಯುವನಿಧಿ ಯೋಜನೆಯಡಿ ಪದವಿ, ಡಿಪ್ಲೊಮಾ ಉತ್ತೀರ್ಣರಾದ ನಿರುದ್ಯೋಗಳಿಗೆ ಭತ್ಯೆ ವಿತರಿಸುವ ಮೂಲಕ ಉದ್ಯೋಗ ಲಭಿಸುವವರೆಗೆ ಆರ್ಥಿಕ ಸಹಾಯ ಕಲ್ಪಿಸಿದ್ದು ತಾಲೂಕಿನಲ್ಲಿ ಒಟ್ಟು 11,819 ಯುವ ಜನತೆ ಸರ್ಕಾರದ ಯುವನಿಧಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿರುವುದು ತಾಲೂಕಿನ ಜನತೆಗೆ ವರದಾನವಾಗಿದೆ. ಉಚಿತ್ ವಿದ್ಯುತ್, ಶಕ್ತಿ ಯೋಜನೆಯಡಿ ಉಚಿತ ಪಯಣ, ಅನ್ನಭಾಗ್ಯ ಜಾರಿಗೊಳಿಸಿ ಹಸಿವಿನಿಂದ ಬಳಲದಂತೆ ಕ್ರಮ ಹಾಗೂ ಕುಟುಂಬ ಯಜಮಾನಿಗೆ ಗೃಹಲಕ್ಷ್ಮೀ ಹಣ ಜಮೆಗೊಳಿಸಿ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ ಎಂದು ತಿಳಿಸಿದರು.

ತಾಪಂ ಕಾರ್ಯನಿರ್ವಹಕ ಅಧಿಕಾರಿ ವಿಜಯ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಧಿಕಾರಿ ವೃಂದ ಸಮಗ್ರವಾಗಿ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಯೋಜನೆಗಳ ಸೌಲಭ್ಯ ಒದಗಿಸಿಕೊಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತಾಲೂಕು ಗ್ಯಾರಂಟಿ ಪ್ರಾಧೀಕಾರದ ಉಪಾಧ್ಯಕ್ಷ ಅನ್ಸರ್‌ ಆಲಿ, ಸದಸ್ಯರಾದ ನಾಗೇಶ್‌ ರಾಜ್ ಅರಸ್, ಪುನೀತ್, ಗೌಸ್‌ ಮೊಹಿಯುದ್ದೀನ್, ನಟರಾಜ್, ಧರ್ಮಯ್ಯ, ಜಯಂತಿ, ಹಸೇನಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ