ಶಿವಮೊಗ್ಗ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಕುಟುಂಬಗಳ ಸಹಕಾರಕ್ಕೆ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಮ್ಮ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಒದಗಿಸಿದೆ. ಅದರ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳಬೇಕು. ಶಿಕ್ಷಕರು ಮಕ್ಕಳ ಹಾಜರಾತಿ ಬಗ್ಗೆ ಗಮನ ಹರಿಸಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕು ಎಂದರು.
ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚುರುಕು ನೀಡಲಾಗುವುದು. ಸಾರ್ವಜನಿಕರ ಭೇಟಿ ಮಾಡಿ ಕುಂದು ಕೊರತೆ ಅಹವಾಲು ಸ್ವೀಕರಿಸಿ, ಸಮಸ್ಯೆಗಳ ಪರಿಹಾರದ ಕಡೆ ಗಮನ ಹರಿಸಲಾಗುವುದು. ಅಗತ್ಯವಿರುವ ಶಾಲೆಗಳಿಗೆ ಹೆಚ್ಚು ಅನುದಾನ ಒದಗಿಲಾಗುವುದು ಎಂದು ತಿಳಿಸಿದರು.ಈ ಭಾಗದ ಜನರು ಕಾಗೋಡು ತಿಮ್ಮಪ್ಪ, ಬಂಗಾರಪ್ಪನವರನ್ನು ಅವರು ಭೂ ಹಕ್ಕು ಕಾಯ್ದೆಗಾಗಿ ಮಾಡಿದ ಹೋರಾಟವನ್ನು ಸ್ಮರಿಸುತ್ತಾರೆ. ಅವರು ಮಾಡಿದ ಕೆಲಸಗಳು ಜೀವಂತವಾಗಿವೆ. ಅದೇ ನಿಟ್ಟಿನಲ್ಲಿ ನಾವು ಕೂಡ ಜನರು ನೆನೆಯುವ, ಜೀವಂತವಾಗಿರುವ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.
ಶರಾವತಿ ಸಂತ್ರಸ್ತರಿಗೆ ನ್ಯಾಯ
ಶಿವಮೊಗ್ಗ: ಶರಾವತಿ ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸರ್ಕಾರ ಸಂತ್ರಸ್ತರ ಕೈ ಹಿಡಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಳಗುಪ್ಪ-ಸಾಗರದಿಂದ ಕುಡಿಯುವ ನೀರಿನ ಕುರಿತು ಡಾ.ಕಾಗೋಡು ತಿಮ್ಮಪ್ಪನವರ ಜೊತೆಗೂಡಿ ಮೊದಲ ಬಾರಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದೆ. ಕಾಗೋಡು ತಿಮ್ಮಪ್ಪನವರೇ ಖುದ್ದು ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಿದ್ದರು. ಅದು ರದ್ದಾಯಿತು. ಅವರಿಗೆ ಹಕ್ಕುಪತ್ರ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಶೀಘ್ರದಲ್ಲೇ ಅವರಿಗೆ ನ್ಯಾಯ ಒದಗಲಿದೆ. ಸರ್ಕಾರ ಸಂತ್ರಸ್ತರ ಪರವಾಗಿದೆ ಎಂದು ಭರವಸೆ ನೀಡಿದರು.