ಕೊಪ್ಪಳ: ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ನೇರವಾಗಿ ಹಣ ಫಲಾನುಭವಿಗಳಿಗೆ ಸೇರುತ್ತದೆ. ಇದರಿಂದ ಬಡವರ ಬದುಕು ಹಸನವಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ತಾಲೂಕಿನ ಕಾತರಕಿ-ಗುಡ್ಲಾನೂರು, ಬೇಳೂರು, ಡಂಬ್ರಳ್ಳಿ, ಬೂದಿಹಾಳ, ಬಿಸರಳ್ಳಿ, ಬಿಕನಳ್ಳಿ, ಮೈನಳ್ಳಿ, ಹಂದ್ರಾಳ, ಹಣವಾಳ ಮತ್ತು ವದಗನಾಳ ಗ್ರಾಮಗಳಲ್ಲಿ ಅಂದಾಜು ₹ 5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನವಾಗುತ್ತಿದೆ. ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳ ಕುರಿತು ದಾರಿ ತಪ್ಪಿಸುವ ಕೆಲಸ ಮಾಡಿದ್ರು ಕೂಡ ಅದಕ್ಕೆ ಮುಖ್ಯಮಂತ್ರಿಗಳು ತಲೆಕೆಡಿಸಿಕೊಳ್ಳದೆ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದರು. ಇದರಿಂದ ಬಡವರ ಬದುಕ ಹಸನಾಗಿದೆ ಎಂದರು.
ಪ್ರತಿಯೊಂದು ಕುಟುಂಬಕ್ಕೆ ಸರ್ಕಾರದ ಯೋಜನೆಗಳು ತಲುಪುತ್ತಿವೆ ಎಂದರು.ಕಾತರಕಿ -ಗುಡ್ಲಾನೂರು ಗ್ರಾಮದಲ್ಲಿರುವ 30 ಬೆಡ್ಡಿನ ಪಿಎಚ್ ಸಿಯನ್ನು ಮುಂದೆ ಸಿಎಚ್ ಸಿಯನ್ನಾಗಿ ಮೇಲ್ದರ್ಜೆಗೇರಿಸುತ್ತೇವೆ. ಇದರಿಂದ ಸುತ್ತು -ಮುತ್ತಲಿನ ಗ್ರಾಮದ ಜನರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ ಎಂದರು.
ಸಿಂಟಾಲೂರು ನೀರಾವರಿ ಯೋಜನೆಗೆ ₹504 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇವೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿ ಸಿಂಗಟಾಲೂರು ನೀರಾವರಿ ಯೋಜನೆಯಡಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದರು.ಈ ಸಂಧರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗಾರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ಗ್ರಾಪಂ ಅಧ್ಯಕ್ಷ ಶಂಕ್ರಮ್ಮ ಭೈರನ್ನವರ್, ಗವಿಸಿದ್ದಪ್ಪ ಕರಡಿ, ಗೂಳಪ್ಪ ಹಲಿಗೇರಿ, ಪ್ರಸನ್ನ ಗಡಾದ್, ಹನುಮರಡ್ಡಿ ಅಂಗನಕಟ್ಟಿ, ಕೃಷ್ಣರಡ್ಡಿ ಗಲ್ಬಿ, ವೆಂಕನಗೌಡ್ರು ಹಿರೇಗೌಡ್ರು, ಗಾಳೆಪ್ಪ ಪೂಜಾರ್, ತೋಟಪ್ಪ ಕಾಮನೂರು, ಯಲ್ಲನಗೌಡ್ರು, ಕೇಶವರಡ್ಡಿ ಮಾದಿನೂರು ಮೊದಲಾದವರು ಇದ್ದರು.