ಕನ್ನಡಪ್ರಭ ವಾರ್ತೆ ಬಾದಾಮಿ

ಧಾರ್ಮಿಕ ಶ್ರದ್ಧಾಕೇಂದ್ರ ಸುಕ್ಷೇತ್ರ ಮದ್ವೀರಶೈವ ಶಿವಯೋಗ ಮಂದಿರದ 116 ನೇ ಕಾರಣಿಕ ಯುಗಪುರು, ಹಾನಗಲ್ ಕುಮಾರ ಶ್ರೀಗಳ 65 ಅಡಿ ಎತ್ತರದ ಮಾಹಾರಥೋತ್ಸವ ಸೋಮವಾರ ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ (65 ಅಡಿ) ಮಾಹಾರಥೋತ್ಸವಕ್ಕೆ ಸಾಂಪ್ರದಾಯಕವಾಗಿ ಪೂಜೆ ನೆರೆವೇರಿಸಿದ ಸಂಸ್ಥೆಯ ಅಧ್ಯಕ್ಷ, ಮೂರು ಸಾವಿರಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಶಿರಬಡಗಿ ಗ್ರಾಮದ ಭಕ್ತಾದಿಗಳು ತಂದ ಹಗ್ಗದಿಂದ ಭಕ್ತಗಣ ರಥ ಎಳೆಯಲಾಯಿತು. ಭಕ್ತರು ರಥಕ್ಕೆ ಹೂವು ಸಮರ್ಪಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಅಪಾರ ಭಕ್ತ ಸಮೂಹ ಶಿವನ ಹಾಗೂ ಶಿವಯೋಗಿಗಳ ಸ್ಮರಣೆ ಮೂಲಕ ರಥ ಎಳೆದರು. ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮೂರು ಸಾವಿರಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ, ಉಪಾಧ್ಯಕ್ಷ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಜರುಗಿದವು.

ಹೊಳೆಹುಚ್ಚೇಶ್ವರ ಶ್ರೀಗಳು, ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸೇರಿ ನಾಡಿನ ನಾನಾ ಮಠಗಳ ನೂರಾರು ಮಠಾಧೀಶರು, ಸ್ವಾಮೀಜಿಗಳು, ವಟುಸಾಧಕರು ಇದ್ದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಧರ್ಮದರ್ಶಿ ಎಂ.ಬಿ. ಹಂಗರಗಿ, ಶರಣಪ್ಪಗೌಡ ಪಾಟೀಲ, ಕುಮಾರಗೌಡ ಜನಾಲಿ, ಮಹಾಂತೇಶ ಮಮದಾಪೂರ, ಶಾಂತಗೌಡ ಪಾಟೀಲ, ಬಸವರಾಜ ಪಾಟೀಲ, ಸಿದ್ದನಗೌಡ ಪಾಟೀಲ, ಆರ್.ಬಿ. ಪಾಟೀಲ, ಮುಕ್ಕಣಗೌಡ ಜನಾಲಿ, ನಾಗರಾಜ ಕಾಚೆಟ್ಟಿ, ಡಾ.ಆರ್.ಸಿ. ಭಂಡಾರಿ, ಪಂಪಣ್ಣ ಕಾಚೆಟ್ಟಿ, ಸಿಪಿಐ. ಕರೆಪ್ಪ ಬನ್ನೆ, ಪಿಎಸ್.ಐ ಹನುಮಂತ ನರಳೆ, ಜಿಲ್ಲೆಯ ವಿವಿಧ ಭಾಗಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ತಾಲೂಕಿನ ಮಂಗಳೂರು ಗ್ರಾಮದ ಭಜನಾ ಮಂಡಳಿಯವರು ನಂದಿಕೋಲು ಮೆರವಣಿಗೆಯೊಂದಿಗೆ ಮಹಾರಥೋತ್ಸವದಲ್ಲಿ ಭಾಗಿಯಾಗಿದ್ದು ಗಮನ ಸೆಳೆಯಿತು.