ಎಲ್ಲಾ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ತಲುಪಬೇಕು: ಅರುಣ್ ಕುಮಾರ್

KannadaprabhaNewsNetwork |  
Published : May 09, 2026, 01:15 AM IST
1 | Kannada Prabha

ಸಾರಾಂಶ

ಕೆಲವು ಜನರಿಗೆ ಗೃಹಲಕ್ಷ್ಮಿ ಹಣ ದೊರೆಯುತ್ತಿಲ್ಲ ಎಂಬ ದೂರು ಇದೆ ಎಂದು ಸಭೆಯಲ್ಲಿ ಕೇಳಿದಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರತಿಕ್ರಿಯಿಸಿ, ಯಾರು ಆದಾಯ ತೆರಿಗೆ ಪಾವತಿದಾರರು ಇದ್ದಾರೆ, ಅವರಿಗೆ ಗೃಹಲಕ್ಷ್ಮಿ ಹಣ ನೀಡಲು ನಿಯಮದಲ್ಲಿ ಅವಕಾಶವಿಲ್ಲ. ಯಾರಾದರೂ ಅರ್ಹ ಫಲಾನುಭವಿಗಳು ಇದ್ದರೆ ಪರೀಕ್ಷಿಸಿ ಸೇರ್ಪಡೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ 5 ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ತಲುಪಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

ನಗರದ ಜಿಪಂ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಕೆಲವು ಜನರಿಗೆ ಗೃಹಲಕ್ಷ್ಮಿ ಹಣ ದೊರೆಯುತ್ತಿಲ್ಲ ಎಂಬ ದೂರು ಇದೆ ಎಂದು ಸಭೆಯಲ್ಲಿ ಕೇಳಿದಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರತಿಕ್ರಿಯಿಸಿ, ಯಾರು ಆದಾಯ ತೆರಿಗೆ ಪಾವತಿದಾರರು ಇದ್ದಾರೆ, ಅವರಿಗೆ ಗೃಹಲಕ್ಷ್ಮಿ ಹಣ ನೀಡಲು ನಿಯಮದಲ್ಲಿ ಅವಕಾಶವಿಲ್ಲ. ಯಾರಾದರೂ ಅರ್ಹ ಫಲಾನುಭವಿಗಳು ಇದ್ದರೆ ಪರೀಕ್ಷಿಸಿ ಸೇರ್ಪಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಬಿಪಿಎಲ್ ಕಾರ್ಡ್ ಮಾಡಿಸಲು ಪೋರ್ಟಲ್ ಓಪನ್ ಆದಾಗ ಪತ್ರಿಕಾ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಮಾಹಿತಿ ದೊರೆಯುವಂತೆ ಮಾಡಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಅತ್ಯವಶ್ಯಕವಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದೆ ಇದ್ದರೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಹಾಗೂ ಸ್ಕ್ಯಾನಿಂಗ್ ಸೌಲಭ್ಯಗಳು ದೊರೆಯುವುದಿಲ್ಲ. ಆದ್ದರಿಂದ ಅರ್ಹರಿಗೆ ಬಿಪಿಎಲ್ ಕಾರ್ಡ್ ಗಳನ್ನು ನೀಡಲು ಕ್ರಮ ವಹಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಅವರು ಸೂಚಿಸಿದರು.

ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಆರ್ ಓ ಘಟಕಗಳನ್ನು ಅಳವಡಿಸಿ. ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಟಿಕೆಟ್ ಹಣ ಆನ್ ಲೈನ್ ನಲ್ಲೂ ಪಾವತಿ ವ್ಯವಸ್ಥೆ ಇರುವ ಬಗ್ಗೆ ಫಲಕಗಳನ್ನು ಅಳವಡಿಸಿ. ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಬೇಕು. ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಯಾರು ಮರಣ ಹೊಂದಿದ್ದಾರೆ ಅವರಿಗೂ ಹಣ ಹೋಗುತ್ತಿದೆ. ಅವರಿಗೆ ಸ್ಥಗಿತಗೊಳಿಸಬೇಕು ಹಾಗೂ ಮರಣದಿಂದ ಇಲ್ಲಿಯವರೆಗೆ ಅವರಿಗೆ ಪಾವತಿ ಆಗಿರುವ ಹಣವನ್ನು ಹಿಂಪಡೆಯಬೇಕು. ಮುಂದೆ ಯಾರೇ ಫಲಾನುಭವಿ ಮರಣ ಹೊಂದಿದರೆ ಆಟೋಮ್ಯಾಟಿಕ್ ಆಗಿ ಹಣ ಪಾವತಿ ಸ್ಥಗಿತವಾಗುವಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಿ ಎಂದರು.

ಜಿಲ್ಲೆಯಲ್ಲಿ 680301 ಪಡಿತರ ಚೀಟಿಗಳು ಇವೆ. ಐಟಿ ಪಾವತಿ ಮಾಡಿರುವ ಹಾಗೂ 7.5 ಹೆಕ್ಟರ್ ಭೂಮಿ ಹೊಂದಿರುವವರ 23 ಸಾವಿರ ಕಾರ್ಡ್ ಗಳನ್ನು ಎಪಿಎಲ್ ಗೆ ಬದಲಾವಣೆ ಮಾಡಲಾಗಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 968228 ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಡಿ ನೋಂದಣಿ ಆಗಿದ್ದಾರೆ. 6548 ಫಲಾನುಭವಿಗಳು ನೋಂದಣಿಗೆ ಬಾಕಿ ಇದ್ದಾರೆ. ಶೇ.60 ರಷ್ಟು ಫಲಾನುಭವಿಗಳಿಗೆ ಶೂನ್ಯ ಬಿಲ್ ಬರುತ್ತದೆ. ಶೇ.40 ಫಲಾನುಭವಿಗಳು ಸರಾಸರಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುವುದರಿಂದ ಬಿಲ್ ಬರುತ್ತದೆ ಎಂದು ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಸುನಿಲ್ ವಿವರಿಸಿದರು.

ಪ್ರಾಧಿಕಾರದ ಉಪಾಧ್ಯಕ್ಷರಾದ ಹುಣಸೂರು ಬಸವಣ್ಣ, ಬಿ.ಎನ್. ಕರೀಗೌಡ, ತಾಲೂಕು ಅಧ್ಯಕ್ಷ ನಿತಿನ್ ವೆಂಕಟೇಶ್, ಸದಸ್ಯರಾದ ಸಾ.ಮಾ. ಯೋಗೇಶ್, ಎಂ.ಎಸ್. ಮಹದೇವ, ಲಲಿತಾ, ಅಬ್ದುಲ್ ಖಾದರ್, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಮೊದಲಾದವರು ಇದ್ದರು.

ಗೃಹಲಕ್ಷ್ಮಿ ಹಣವನ್ನು ಯಾವುದೇ ಬ್ಯಾಂಕ್ ನವರು ಸಾಲಕ್ಕೆ ವಜಾ ಮಾಡಿಕೊಳ್ಳದೆ ಮಾನವೀಯತೆ ಆದಾರದ ಮೇಲೆ ಫಲಾನುಭವಿಗಳಿಗೆ ನೀಡಬೇಕು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮರಣ ಹೊಂದಿದರೆ ಅವರಿಗೆ ಹಣ ಪಾವತಿ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು.

- ಎಸ್.ಯುಕೇಶ್ ಕುಮಾರ್, ಸಿಇಒ, ಜಿಪಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿ ಸಾಧನೆಗೆ ಶ್ರಮ, ಸಮಯ ಅಗತ್ಯ: ಡಾಲಿ ಧನಂಜಯ್
ಪೂರ್ಣಕುಂಭ ಹೊತ್ತು ಸಾಗಿದ ಸೌಭಾಗ್ಯ