ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್.ದಿನೇಶ್ ಹೇಳಿದರು.ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ಹಣ ಬಳಸಿ ವಿವಿಧ ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರನ್ನು ಅಭಿನಂದಿಸಿ ಮಾತನಾಡಿ, ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ಮನೆ ಯಜಮಾನಿಯರಿಗೆ ಪ್ರತಿ ತಿಂಗಳ ನೀಡುವ 2 ಸಾವಿರ ರು. ಹಣ ಕೂಡಿಟ್ಟು ಸಣ್ಣ ಸಣ್ಣ ವ್ಯಾಪಾರಗಳನ್ನು ನಡೆಸುವ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರು ತಮ್ಮ ಆರ್ಥಿಕ ಪರಿಸ್ಥಿತಿ ಜೀವನವನ್ನು ಬದಲಾಯಿಸಿಕೊಂಡಿದ್ದಾರೆ ಎಂದರು.
ಗ್ಯಾರಂಟಿ ಯೋಜನಾಧಿಕಾರಿ ತ್ರಿವೇಣಿ ಮಾತನಾಡಿ, ಐದು ಗ್ಯಾರಂಟಿಗಳು ಕೂಡ ಜನರಿಗೆ ಆಶಯವಾಗಿದೆ ಎಂದರು.ಆಹಾರ ಇಲಾಖೆ ಶಿರೆಸ್ತೇದಾರ್ ಪೂರ್ಣಿಮ ಮಾತನಾಡಿ, ಪಡಿತರ ಚೀಟಿಯಲ್ಲಿ ಹೆಸರು ಬಿಟ್ಟಿದ್ದರೆ ಕರ್ನಾಟಕ ಒನ್ ಅವರನ್ನು ಸಂಪರ್ಕಿಸಿ ಹೆಸರು ಸೇರಿಸಬಹುದು. ಕೆಲಸದಲ್ಲಿದ್ದು ವೇತನ ಪಡೆಯುತ್ತಿದ್ದರೆ ಐಟಿ ಯಾಗಿದ್ದವರು ಬಿಪಿಎಲ್ ಚೀಟಿ ಪಡೆದಿದ್ದರೆ ಅವರು ಪಡಿತರ ಚೀಟಿಯನ್ನು ಹಿಂದುರಿಗಿಸಿ ಎಪಿಎಲ್ ಆಗಿ ಬದಲಿಸಿಕೊಳ್ಳುಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಬಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಸಕಲೇಶ್ವರ್, ಕಾರ್ಮಿಕ ಇಲಾಖೆ ಹರ್ಷ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ಪಿಡಿಒ ಕುಳ್ಳೇಗೌಡ, ಗ್ರಾಪಂ ಸದಸ್ಯೆ ಲಕ್ಷ್ಮಮ್ಮ, ಗ್ಯಾರಂಟಿ ಸಮಿತಿ ಸದಸ್ಯರಾದ ರವಿಕುಮಾರ್, ಸಂಜಯ್, ಗೌಡಹಳ್ಳಿ ದೇವರಾಜು, ಸತೀಶ್, ನಾಗರಾಜು ಬಸ್ತಿಪುರ ಸೇರಿದಂತೆ ಇತರ ನೂರಾರು ಮಹಿಳೆಯರು ಇದ್ದರು.ಸೆ.18 ರಂದು ಬ್ಯಾಂಕ್ ನ 73ನೇ ಮಹಾಸಭೆ
ಮಳವಳ್ಳಿ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ 73ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ಸೆ.18ರಂದು ನಡೆಯಲಿದೆ. ಬ್ಯಾಂಕ್‌ನ ಆವರಣದಲ್ಲಿ ಬೆಳಗ್ಗೆ 11ಗಂಟೆಗೆ ನಡೆಯುವ ಸಭೆಯಲ್ಲಿ ಅಧ್ಯಕ್ಷ ಸಿ.ದೊಡ್ಡಮಾದೇಗೌಡ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ರಾಜ್ಯ ಬ್ಯಾಂಕ್ ಜಿಲ್ಲಾ ನಿರ್ದೇಶಕ ತಿಮ್ಮರಾಯಿಗೌಡ ಹಾಗೂ ಉಪಾಧ್ಯಕ್ಷ ಎಚ್.ಎಸ್.ವೀರೇಶ್ ಗೌಡ ಹಾಗೂ ನಿರ್ದೇಶಕರು ಭಾಗವಹಿಸಲಿದ್ದಾರೆ ಎಂದು ಬ್ಯಾಂಕ್ ವ್ಯವಸ್ಥಾಪಕ ಜಿ.ಎಸ್.ವೆಂಕಟೇಶ್ ತಿಳಿಸಿದ್ದಾರೆ.