ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ: ಡಾ.ಪುಷ್ಪಾ ಅಮರನಾಥ್

KannadaprabhaNewsNetwork |  
Published : Jan 20, 2025, 01:32 AM IST
ಸರಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲವುದಿಲ್ಲ- ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ | Kannada Prabha

ಸಾರಾಂಶ

ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕಾಗಿದೆ ಎಂದು ಡಾ. ಪುಷ್ಪಾ ಅಮರನಾಥ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಮತ್ತು ಗೃಹಲಕ್ಷ್ಮೀ ಯೋಜನೆಗಳು ರಾಜ್ಯಾದ್ಯಂತ ಶೇ.೮೦ರಷ್ಟು ಕುಟುಂಬಗಳ ಪಾಲಿಗೆ ವರದಾನವಾಗಿದೆ. ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳನ್ನು ಮಾಡುವುದಲ್ಲ, ಬಡವರ ಕುಟುಂಬದ ಕಲ್ಯಾಣವಾಗಬೇಕು. ಐದು ಗ್ಯಾರಂಟಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ಪ್ರತಿ ಕುಟುಂಬದ ಸುಮಾರು ೭ ಸಾವಿರ ರು.ಗಳ ಖರ್ಚನ್ನು ಸರ್ಕಾರವೇ ಭರಿಸುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಹಣ ಕೆಲವು ತಾಂತ್ರಿಕ ತೊಂದರೆಯಿಂದ ಸಮಸ್ಯೆಯಾಗಿದೆಯೇ ಹೊರತು ಕಳೆದ ಎರಡು ಮೂರು ತಿಂಗಳುಗಳ ಹಣ ಒಟ್ಟಿಗೇ ಜಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗೃಹಲಕ್ಷ್ಮೀ ಯೋಜನೆಯಡಿ ಸೋಮವಾರಪೇಟೆ ತಾಲೂಕಿನಲ್ಲಿ ೪,೯೧,೬೬,೦೦೦ ರು.ಗಳು ಜಮೆಯಾಗಿವೆ. ಸೆಸ್ಕ್ ಇಲಾಖೆ ಬಿಲ್ ೯೮ ಕೋಟಿ ಪಾವತಿ ಆಗಿದೆ. ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ೧೨೫೧ ಅಂತ್ಯೋದಯ ಕಾರ್ಡ್, ೨೨,೫೯೦ ಬಿಪಿಎಲ್ ಕಾರ್ಡ್, ೪೬೧೬ ಎಪಿಎಲ್ ಕಾರ್ಡ್‌ಗಳಿದ್ದು, ೩೦೦ ಅರ್ಜಿಗಳು ವಿಲೇವಾರಿಯಾಗಿಲ್ಲ ಎಂದು ಹೇಳಿದರು.

ಆಹಾರ ಇಲಾಖೆಯ ಅಧಿಕಾರಿಗಳು ತಾಲೂಕಿನ ಜೇನು ಕುರುಬ ಹಾಡಿಗಳಿಗೆ ತೆರಳಿ ಸ್ಥಳದಲ್ಲಿಯೇ ೧೩೬ ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಿದ ಹಿನ್ನೆಲೆಯಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದರು. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆ ನಡಿಗೆ ಮನೆ ಮನೆಗೆ ಎಂಬ ಧ್ಯೇಯವಾಕ್ಯವನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಲಾಗುವುದು ಎಂದರು.

ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಜಿಲ್ಲೆಯಲ್ಲಿ ಇದುವರೆಗೆ ೯೧,೧೬,೦೬೦ ಮಹಿಳೆಯರು ಪ್ರಯಾಣಿಸಿದ್ದಾರೆ. ಸರ್ಕಾರ ೩೬,೧೫,೪೩,೨೯೭ ರು.ಗಳನ್ನು ಇಲಾಖೆಗೆ ಪಾವತಿ ಮಾಡಿದೆ. ಆದರೂ ಜಿಲ್ಲೆಯಲ್ಲಿ ಬಸ್‌ಗಳ ಕೊರತೆ ಇದೆ. ಕೋವಿಡ್ ಕಾಲದಲ್ಲಿ ಸ್ಥಗಿತಕೊಂಡ ಮಾರ್ಗಗಳನ್ನು ಪುನರಾರಂಭ ಮಾಡಿಲ್ಲ. ಸೋಮವಾರಪೇಟೆಯಿಂದ ಮಡಿಕೇರಿ ಹಾಗೂ ಮಡಿಕೇರಿಯಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ಮನಗಂಡ ಅನುಷ್ಠಾನ ಸಮಿತಿ ಉಪಾಧ್ಯಕ್ಷರು, ಒಂದು ವಾರದೊಳಗೆ ಈ ಸಮಸ್ಯೆಯನ್ನು ಪರಿಹರಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕ ವ್ಯವಸ್ಥಾಪಕ ಮಹಮ್ಮದ್ ಆಲಿ ಅವರಿಗೆ ಸೂಚನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಪಪಂ ಸದಸ್ಯೆ ಶೀಲಾ ಡಿಸೋಜಾ, ಸಮಿತಿ ಸದಸ್ಯರು ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ