ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಯೋಜನೆಗಳಿಂದ ವಂಚಿತವಾಗಿರುವ ಫಲಾನುಭವಿಗಳ ಸಮಸ್ಯೆಯನ್ನು ಸ್ಥಳದಲ್ಲೆ, ಬಗೆಹರಿಸುವ ನಿಟ್ಟಿನಲ್ಲಿ ಗ್ಯಾರಂಟಿ ನಡೆ ಗ್ರಾಪಂ ಕಡೆ ಎಂಬ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಿ.ಟಿ. ಭರತ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಮಹಿಳೆಯರು ಸರ್ಕಾರದ ಕೆಲ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ, ಆದರಿಂದ ಅವರ ಮನೆ ಬಾಗಿಲಿಗೆ ಅಧಿಕಾರಿಗಳು ಮತ್ತು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಹೋಗಿ ಸಮಸ್ಯೆ ಬಗೆ ಹರಿಸಿ, ಯೋಜನೆಗಳ ವ್ಯಾಪ್ತಿಗೆ ತರುವಂತಹ ಕೆಲಸ ಮಾಡಲಾಗುವುದು ಎಂದರು.ಸರ್ಕಾರದ ನಿರ್ದೇಶನದಂತೆ ಎಲ್ಲ ನ್ಯಾಯ ಬೆಲೆ ಅಂಗಡಿಗಳ ಮುಂದೆ, ನಾಮಫಲಕದಲ್ಲಿ ಫಲಾನುಭವಿಗೆ ವಿತರಿಸುವ ಆಹಾರದ ಧಾನ್ಯದ ಪ್ರಮಾಣವನ್ನು ಕಡ್ಡಾಯವಾಗಿ ಬೋರ್ಡ್ ಅಳವಡಿಸಬೇಕೆಂದು ಆಹಾರ ಇಲಾಖೆ ಅಧಿಕಾರಿ ನೀಡಿದ ಸೂಚನೆಗೆ ಧ್ವನಿಗೂಡಿಸಿದ ತಾಪಂ ಇಒ ಜಿ.ಪರಮೇಶಪ್ಪ ಆಹಾರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೇ, ಅಂತವರ ಪಡಿತರ ಕಾರ್ಡ್‌ನ್ನು ರದ್ದುಪಡಿಲಾಗುವುದು ಎಂದು ಎಚ್ಚರಿಕೆಯ ಮಾಹಿತಿ ಹಾಕಬೇಕೆಂದು ಹೇಳಿದರು.
ಸ್ಲಂ ಬೋರ್ಡ್‌ನಿಂದ ನಿರ್ಮಿಸಿದ ಫಲಾನುಭವಿಗಳ ಮನೆಗಳಿಗೆ ಗೃಹ ಜ್ಯೋತಿ ಯೋಜನೆ ಅನ್ವಯವಾಗುತ್ತಿಲ್ಲ. ಈ ಕುರಿತು ಜೆಸ್ಕಾಂ ಅಧಿಕಾರಿಗಳನ್ನು ಕೇಳಿದಾಗ, ಪುರಸಭೆಯ ಮನೆ ನಿರ್ಮಾಣದ ಪರವಾನಿಗಿ, ನಿರಪೇಕ್ಷಣಾ ಪತ್ರ ಕಡ್ಡಾಯವಾಗಬೇಕು, ಇಲ್ಲದಿದ್ದರೇ ಅಂತವರು ಯೋಜನೆ ವ್ಯಾಪ್ತಿಗೆ ಒಳ ಪಡುವುದಿಲ್ಲ ಈ ಕುರಿತು ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಸಮಿತಿ ಸದಸ್ಯ ಗುರುರಾಜ ಸಭೆಯ ಗಮನಕ್ಕೆ ತಂದರು.ಇದಕ್ಕೆ ಸ್ಪಂದಿಸಿದ ಜೆಸ್ಕಾಂ ಎಇಇ ಕೇದಾರನಾಥ, ಈಗಾಗಲೇ ಸೂಕ್ತ ದಾಖಲೆ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರಿಂದ ಆ ಫಲಾನುಭವಿಗಳು ಸೂಕ್ತ ದಾಖಲೆ ನೀಡಿದರೇ ವಿದ್ಯುತ್ ಸಂಪರ್ಕ ನೀಡುತ್ತೇವೆಂದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿ, ಜೆಸ್ಕಾಂ ಎಇಇ, ಸ್ಲಂ ಬೋರ್ಡ್ ಅಧಿಕಾರಿಗಳ ಸಭೆ ಮಾಡಿ, ಸೂಕ್ತ ಮಾಹಿತಿ ಪಡೆದು, ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆಂದು ಭರತ್ ಹೇಳಿದರು.ಪಟ್ಟಣದ ಪುಟ್ಟಪ್ಪನ ಸೊಸೈಟಿಯಲ್ಲಿ ಆಹಾರ ಧಾನ್ಯ ವಿತರಿಸುವಾಗ ಫಲಾನುಭವಿಗಳಿಂದ ₹20 ವಂತಿಗೆ ವಸೂಲಿ ಮಾಡುತ್ತಾರೆ. ಈ ಕುರಿತು ಅಧಿಕಾರಿಗಳು ಕ್ರಮ ವಹಿಸಿಲ್ಲವೆಂದು ಇಬ್ರಾಹಿಂ ಖಲೀಲ್ ಸಭೆ ಗಮನಕ್ಕೆ ತಂದಾಗ, ಆಹಾರ ಇಲಾಖೆ ಅಧಿಕಾರಿ ಭಾರತಿ ಕೂಡಲೇ ಕ್ರಮ ವಹಿಸುತ್ತೇವೆಂದು ಭರವಸೆ ನೀಡಿದರು.
ನ್ಯಾಯಬೆಲೆ ಅಂಗಡಿಗಳಲ್ಲಿನ ಆಹಾರ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟ ದಂಧೆಯನ್ನು ತಡೆಯಬೇಕಿದೆ. ಅಂತವರನ್ನು ಪತ್ತೆ ಹಚ್ಚಿ ಕಾರ್ಡ್ ರದ್ದು ಪಡಿಸುವಂತಹ ಪ್ರಕ್ರಿಯೆ ನಡೆಯಬೇಕಿದೆ. ಕೆಲ ನ್ಯಾಯ ಬೆಲೆ ಅಂಗಡಿಗಳು ಇದರಲ್ಲಿ ಶಾಮೀಲಾಗಿವೆ ಎಂದು ಸಮಿತಿ ಸದಸ್ಯ ರಾಜು ಗುರುವಿನ ಸಭೆಯಲ್ಲಿ ಆರೋಪಿಸಿದರು.ಈ ಸಂದರ್ಭ ತಾಪಂ ಇಒ ಜಿ.ಪರಮೇಶಪ್ಪ, ತಾಪಂ ನಿರ್ದೇಶಕ ಹೇಮಾದ್ರಿ ನಾಯ್ಕ, ಬಿ.ಎಂ. ಶ್ವೇತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.